Saturday, November 15, 2025
Menu

ಮೆಟ್ರೊ ಯೋಜನೆಯನ್ನು ಬೇಗ ಪೂರ್ಣಗೊಳಿಸಿ: ಆರ್.ಅಶೋಕ

ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಸರವನ್ನು ಹಾಳುಗೆಡವುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.

ಸ್ಯಾಂಕಿ ಕೆರೆ ಬಳಿ ನಡೆದ ಸಹಿ ಸಂಗ್ರಹ ಹಾಗೂ ಪರಿಶೀಲನೆ ಕಾರ್ಯದ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ. ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಂದರೂ ಪರಿಸರವನ್ನು ಹಾಳು ಮಾಡಲು ನೋಡುತ್ತದೆ. ಪರಿಸರ ಇಲಾಖೆ, ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆದಿಲ್ಲ ಎಂದು ದೂರಿದರು.

ಮೆಟ್ರೋ ಯೋಜನೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಲಕ್ಷಾಂತರ ಜನರು ಮೆಟ್ರೊ ಬಳಸುತ್ತಿದ್ದಾರೆ. ಇದನ್ನೇ ಸುಧಾರಣೆ ಮಾಡಿ ಬೇಗ ಯೋಜನೆ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಸುರಂಗ ಕೊರೆದರೆ ಉಂಟಾಗುವ ಹೂಳನ್ನು ಎಲ್ಲಿಗೆ ಸಾಗಿಸುತ್ತಾರೆ ಎಂಬ ಬಗ್ಗೆ ಖಾತರಿಯಿಲ್ಲ. ಕಾಸು ಹೊಡೆಯುವ ಯೋಜನೆ ನಗರಕ್ಕೆ ಬೇಕಿಲ್ಲ. ಈಗಾಗಲೇ ಬಿಹಾರ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಈ ರೀತಿ ಹಣ ಮಾಡಲು ಯೋಜನೆ ಮಾಡಬಾರದು ಎಂದರು.

ತೆರಿಗೆಗಳ ಭಾರದಿಂದ ಬೆಂಗಳೂರಿನ ಜನರಿಗೆ ಚಿತ್ರಹಿಂಸೆಯಾಗಿದೆ. ತ್ಯಾಜ್ಯ, ನೀರು ಎಲ್ಲ ದರ ಏರಿಕೆಯಾಗಿದೆ. ಸುರಂಗ ರಸ್ತೆ ನಿರ್ಮಾಣವಾದರೆ ಅದಕ್ಕೆ 20 ಸಾವಿರ ರೂ. ನಷ್ಟು ಟೋಲ್ ಪಾವತಿಸಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂದರು.

ಬಿಹಾರದ ಜನರಿಗೆ ಅಪಮಾನ

ಕಾಂಗ್ರೆಸ್ ಸೋಲು ಕಂಡಾಗಲೆಲ್ಲ ಮತಗಳ್ಳತನ ಹಾಗೂ ಇವಿಎಂ ಸರಿ ಇಲ್ಲ ಎಂಬ ಆರೋಪ ಬರುತ್ತದೆ. ಬಿಹಾರದಲ್ಲೇ ವೋಟ್ ಚೋರಿ ಬಗ್ಗೆ ಅಭಿಯಾನ ಮಾಡಿದ್ದು, ಅದನ್ನು ಮತದಾರರು ತಿರಸ್ಕರಿಸಿದ್ದಾರೆ. ಮತಪಟ್ಟಿ ಪರಿಷ್ಕರಣೆ ವೇಳೆ ಅನ್ಯದೇಶಗಳ ಜನರ ಹೆಸರು, ಸತ್ತವರ ಹೆಸರು ರದ್ದಾಗಿದೆ. ವಿಶೇಷ ಪರಿಷ್ಕರಣೆ ಸರಿ ಇಲ್ಲ ಎಂದರೆ ಯಾರೂ ನಂಬಲ್ಲ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಮಕಾಡೆ ಮಲಗಿದ್ದು, ಕರ್ನಾಟಕದಲ್ಲೂ ಆಡಳಿತ ಕೊನೆಯಾಗಲಿದೆ. ವೋಟ್ ಚೋರಿ ಎಂದು ಹೇಳಿ ಬಿಹಾರದ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಜನರ ಮುಂದೆ ಕ್ಷಮೆ ಕೇಳಬೇಕು ಎಂದರು.

ಬಿಹಾರದ ಚುನಾವಣೆಯಲ್ಲಿ ಗೆದ್ದಿದ್ದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಅವಕಾಶ ಬರುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯ ಬಲಿಷ್ಠವಾಗಿದ್ದಾರೆ. ರಾಹುಲ್ ಗಾಂಧಿಯ ಮಾತನ್ನು ಇನ್ನು ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯನವರ ಮಾತನ್ನು ರಾಹುಲ್ ಗಾಂಧಿ‌‌ ಕೇಳಬೇಕಾಗುತ್ತದೆ ಎಂದರು.

Related Posts

Leave a Reply

Your email address will not be published. Required fields are marked *