ಬೆಂಗಳೂರು, ಹೊರರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ತಯಾರಿಸಿ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ನಗರದಾದ್ಯಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಪತ್ತೆಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಸಪ್ಲೈರ್‌ಗಳಾದ ಮುನಿರಾಜು, ಅಭಿ,ಹಾಗೂ ಅರಸು ಸೇರಿ ಗ್ಯಾಂಗ್ ನಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಸೇರಿಕೊಂಡು ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು. ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಪ್ಯಾಕೆಟ್ ಹಾಗೂ ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು.
ಓರ್ವ ತಯಾರಿಸಿದ ತುಪ್ಪವನ್ನು ತಮಿಳುನಾಡಿನಿಂದ ಸಪ್ಲೈ ಮಾಡಿದರೆ, ಇನ್ನೋರ್ವ ಅದನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದನು.ಬಂಧಿತರಿಂದ 1,26,95,200 ರೂ ಬೆಲೆಬಾಳುವ 8136 ಲೀಟರ್ ನಂದಿನಿ ಬ್ರಾಂಡ್ ಕಲಬೆರೆಕೆ ತುಪ್ಪ ಹಾಗೂ ಸರಬರಾಜು ಮಾಡುತ್ತಿದ್ದ 4 ವಾಹನಗಳು ಹಾಗೂ ಕಲಬೆರಕೆ ನಂದಿನಿ ತುಪ್ಪವನ್ನು ತಯಾರು ಮಾಡಲು ಬಳಸುತ್ತಿದ್ದ ಮೆಷೀನರಿಗಳು, ತೆಂಗು ಮತ್ತು ಪಾಮ್ ಆಯಿಲ್ ಎಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹು ಬೇಡಿಕೆಯ ನಂದಿನಿ ತುಪ್ಪದ ಮಾರಾಟವನ್ನು ಅರಿತಂತಹ ಆರೋಪಿತರುಗಳು ತಮಿಳುನಾಡು ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ಸಿದ್ದಪಡಿಸಿ ನಕಲಿ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ, ಕೆಎಂಎಫ್ ನ ಅಧಿಕೃತ ಪರವಾನಗಿಯನ್ನು ಪಡೆದಂತಹ ಆರೋಪಿತರುಗಳಿಗೆ ಸರಬರಾಜು ಮಾಡುತ್ತಿದ್ದರು.
ಸದರಿ ಕಲಬೆರೆಕೆ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಬಾಟಲ್‌ಗಳನ್ನು ಆರೋಪಿಗಳು ನಕಲಿ ತುಪ್ಪವನ್ನು ಆಸಲಿ ನಂದಿನಿ ತುಪ್ಪವೆಂದು ಬಿಂಬಿಸಿ, ಬೆಂಗಳೂರಿನ ವಿವಿಧ ಸಗಟು, ಚಿಲ್ಲರೆ ಮತ್ತು ನಂದಿನಿ ಪಾರ್ಲರ್ ಗಳಿಗೆ ಮೂಲ ನಂದಿನಿ ತುಪ್ಪದ ಬೆಲೆಗೆ ಕಲಬೆರೆಕೆ ತುಪ್ಪವನ್ನು ಸರಬರಾಜು ಮಾಡುತ್ತಿದ್ದ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತುಕೆಎಂಎಫ್ ಜಾಗೃತ ದಳದ ಅಧಿಕಾರಿಗಳ ಸಹಯೋಗದಲ್ಲಿ ಗುಪ್ತವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಕಳೆದ ನ.14 ರಂದು ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆಎಂಎಫ್ ಜಾಗೃತ ದಳದ ಅಧಿಕಾರಿಗಳ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಚಾಮರಾಜಪೇಟೆಯ ನಂಜಾಂಬ ಆಗ್ರಹಾರದ ಕೃಷ್ಣ ಎಂಟರ್ ಪ್ರೈಸಸ್‌ನ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂದಿಸಿದ ಗೋಡಾವನ ಮತ್ತು ಅಂಗಡಿಗಳ ಸರಕು ಸಾಗಾಣಿಕೆ ವಾಹನಗಳ ಮೇಲೆ ದಾಳಿ ಮಾಡಿರುತ್ತದೆ ಎಂದು ಹೇಳಿದರು.
ದಾಳಿಯ ವೇಳೆ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ನಂದಿನಿ ಬ್ರಾಂಡ್‌ನ ಸ್ಯಾಚೆಟ್‌ಗಳಿಗೆ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಬೆಂಗಳೂರಿನ ಆರೋಪಿಗಳಿಗೆ ಮತ್ತು ಬೆಂಗಳೂರಿನ ಅಂಗಡಿಗಳಿಗೆ ಸಾಗಿಸುತ್ತಿದ್ದ ವಾಹನ ಚಾಲಕ ಮತ್ತು ಆತನು ಉಪಯೋಗಿಸುತ್ತಿದ್ದ ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿತರ ವಶದಿಂದ ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್‌ಗಳು, 60 ಲಕ್ಷ ರೂ ಮಾಲ್ಯದ 4 ಬೊಲೇರೋ ಕಂಪನಿಯ ಗೂಡ್ಸ್ ವಾಹನಗಳು, ಕೃತ್ಯದಿಂದ ಸಂಪಾದಿಸಿದ 1,19,640 ರೂ ನಗದು ಹಣ, 56.95.200 ರೂ ಬೆಲೆಬಾಳುವ 8136 ಲೀಟರ್ ಕಲಬೆರಕೆಯ ತುಪ್ಪ ತುಂಬಿದ ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಬಾಟಲಿಗಳು, ತೆಂಗು ಮತ್ತು ಪಾಮ್ ಆಯಿಲ್ ತುಂಬಿದ ಕ್ಯಾನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಹೇಳಿದರು.
ಪ್ರಕರಣದಲ್ಲಿ ಇದುವರೆಗೂ ನಾಲ್ವರು ಆರೋಪಿತರುಗಳನ್ನು ವಶಕ್ಕೆ ಪಡೆದು 8,136 ಲೀಟರ್ ಕಲಬೆರೆಕೆ ತುಪ್ಪ, ತೆಂಗು ಮತ್ತು ಪಾಮ್ ಆಯಿಲ್, 1,19,640/-ರೂ ನಗದು ಹಣ, 4 ತುಪ್ಪವನ್ನು ಸಾಗಿಸುವ ಬೊಲೇರೋ ಕಂಪನಿಯ ಗೂಡ್ಸ್ ವಾಹನಗಳು, ತುಪ್ಪವನ್ನು ತಯಾರು ಮಾಡುವ ಹಾಗೂ ಇನ್ನಿತರ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಾಗಿದೆ. ಅಮಾನತ್ತು ಪಡಿಸಿಕೊಂಡಿರುವ ಮಾಲುಗಳ ಒಟ್ಟು ಮೌಲ್ಯ 1,26,95,2000/-ರೂಗಳು ಆಗಿರುತ್ತದೆ. ಈ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳದಲ್ಲಿ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದರು


