ಚಿಕ್ಕಮಗಳೂರು: ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ ಮಲ್ಲೇನಹಳ್ಳಿ ಸಮೀಪದ ಕಾಮೇನಹಳ್ಳಿ ಜಲಪಾತದ ಬಳಿ ನಡೆದಿದೆ.
ಬೆಳಗಾವಿ ಮೂಲದ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಇ ಓದುತ್ತಿದ್ದ ವರುಣ್ ದೇಸಾಯಿ (19) ಮೃತಪಟ್ಟವರು.
ಶನಿವಾರ ಸಂಜೆ ಐವರು ಸ್ನೇಹಿತರ ಜೊತೆ ಮೂರು ಬೈಕಿನಲ್ಲಿ ಕಾಮೇನಹಳ್ಳಿ ಜಲಪಾತದ ಬಳಿ ಹೋಗಿದ್ದ ಈ ವೇಳೆ ಜಲಪಾತದ ಪ್ರದೇಶದ ಅರಿವಿಲ್ಲದೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳಿಯರು ರಾತ್ರಿವರೆಗೂ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಆದರೆ ಮೃತದೇಹ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ವರುಣ್ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಹಾಗೂ ಸ್ಥಳೀಯರು ಬೇರೆ ಊರಿನಿಂದ ಓದಲು ಬರುವ ವಿದ್ಯಾರ್ಥಿಗಳು ಪರಿಚಿಯವಿಲ್ಲದ ಪ್ರದೇಶ, ನೀರು, ಜಲಪಾತ, ಗುಡ್ಡದಂತಹ ಪ್ರದೇಶಗಳ ಬಳಿ ಹೋಗುವಾಗ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.


