ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಶನಿವಾರ ಬೆಳಿಗ್ಗೆ 20 ಜಿಂಕೆಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಇದರಿಂದ ಕಳೆದ ಒಂದು ವಾರದಲ್ಲಿ 28 ಜಿಂಕೆಗಳು ಮೃತಪಟ್ಟಂತಾಗಿದೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೆಲವುಗ ದಿನಗಳ ಹಿಂದೆಯಷ್ಟೇ 8 ಜಿಂಕೆಗಳು ಮೃತಪಟ್ಟಿದ್ದವು. ಇದೀಗ 20 ಜಿಂಕೆಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಜಿಂಕೆಗಳ ಅಸಹಜ ಸಾವಿನ ಆಘಾತಕಾರಿ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.
ಅವರು ಪರೀಕ್ಷೆ ನಡೆಸಲಿದ್ದಾರೆ. ಮೊನ್ನೆ 8 ಜಿಂಕೆಗಳು ಸಾವನ್ನಪ್ಪಿದ್ದವು. ಇಂದು ಮತ್ತೆ 20 ಮೃತಪಟ್ಟಿವೆ. ಇದರಿಂದ ಒಟ್ಟು 28 ಜಿಂಕೆಗಳು ಸಾವಿಗೀಡಾಗಿವೆ. ಬ್ಯಾಕ್ಟಿರಿಯಲ್ ಇನ್ಫೆಕ್ಷನ್ನಿಂದ ಜಿಂಕೆಗಳು ಮೃತಪಟ್ಟಿವೆ. ಬೆಂಗಳೂರಿನ ಬನ್ನೇರುಘಟ್ಟದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಬರುತ್ತಿದ್ದಾರೆ ಎಂದು ಎಂದು ಮೃಗಾಲಯದ ಅಧಿಕಾರಿ ತಿಳಿಸಿದ್ದಾರೆ.
ಕಾಡಾನೆಗಳು ಕೆಸರಿನಲ್ಲಿ ಸಿಲುಕಿ ಸಾವು
ನದಿ ದಾಟಲು ಹೋಗಿ ಎರಡು ಕಾಡಾನೆಗಳು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕುನೂರು ಅರಣ್ಯ ಪ್ರದೇಶದಲ್ಲಿ ನಡೆದಿತ್ತು.
ಕುನೂರು ಅರಣ್ಯ ವ್ಯಾಪ್ತಿಯ ಅರ್ಕಾವತಿ ನದಿ ದಾಟುವಾಗ ಕೆಸರಿನ ಕಳೆಗೆ ಸಿಲುಕಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಕಳೆಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ ಕಾಡಾನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ಕಾಡಾನೆಗಳನ್ನು ಅರಣ್ಯಾಧಿಕಾಗಳು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ರಾತ್ರಿ ವೇಳೆ ಒಟ್ಟು ಆರು ಆನೆಗಳು ಅರ್ಕಾವತಿ ನದಿ ದಾಟುವ ಸಂದರ್ಭದಲ್ಲಿ, ಕೆಸರಿನ ಜೊತೆಗೆ ನದಿಯಲ್ಲಿ ಬೆಳೆದಿರುವ ಕಳೆ (ಜೊಂಡು) ಯಲ್ಲಿ ಸಿಲುಕಿ ಹೊರಬರಲಾಗದೇ ನರಳಾಡಿ 2 ಆನೆಗಳು ಪ್ರಾಣಬಿಟ್ಟಿರುವ ಸಾಧ್ಯತೆ ಇದೆ. ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಡಿಎಫ್ಒ ರಾಮಕೃಷ್ಣಪ್ಪ ಹಾಗೂ ಆರ್ಎಫ್ಒ ಮಲ್ಲೇಶ್ ತಿಳಿಸಿದ್ದರು.


