Menu

ಮೆಟ್ರೋ ರೈಲಿನಲ್ಲಿ ‌ಮಾನವ ಅಂಗಾಂಗ ರವಾನೆ: ಇದೇ ಮೊದಲು

namma metro

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ದಾನಿಯ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯಕ್ಕೆ ಅಂಗಾಂಗ ಕಸಿಯನ್ನು ಯುವಕನೋರ್ವನಿಗೆ ರಾಜರಾಜೇಶ್ವರಿ ನಗರದ ಸ್ಪರ್ಶ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿಸಿ ರೋಗಿಗೆ ಜೀವದಾನ ನೀಡಲಾಗಿದೆ.

ನಗರದ ಸಂಚಾರ ದಟ್ಟಣೆ ನಡುವೆ ಅಂಗಾಂಗ ಸಾಗಾಟ ತ್ವರಿತವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಕೈ ಜೋಡಿಸಿದ್ದು ಶುಕ್ರವಾರ ರಾತ್ರಿ ಬೆಂಗಳೂರಿನ ವೈಟ್‌ಫೀಲ್ಡ್‌ (ಕಾಡುಗೋಡಿ) ಮೆಟ್ರೋ ನಿಲ್ದಾಣದಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್‌ನ್ನು ಮೆಟ್ರೋ ಬೋಗಿಯ ಮೂಲಕ ತಂದು ಯಕೃತ್‌ ಕಸಿ ನೆರವೇರಿಸಲಾಯಿತು.

ವಾರಾಂತ್ಯದ ಸಂಚಾರ ದಟ್ಟಣೆ ಮತ್ತು ಅಂಗಾಂಗವು ಕೆಡದಂತೆ ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಕೃತ್‌ ಕಸಿ ನೆರವೇರಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಯಕೃತ್‌ ಸಾಗಾಟಕ್ಕೆ ನಮ್ಮ ಮೆಟ್ರೋ ನೆರವು ಕೋರಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತವಾದ ಮೆಟ್ರೋ ಸುರಕ್ಷತಾ ಸಿಬ್ಬಂದಿ ಯಕೃತ್‌ ಸಾಗಾಟ ಪ್ರಕ್ರಿಯೆಯನ್ನು ಸುಗಮವಾಗಿ ಮಾಡುವಲ್ಲಿ ಎಲ್ಲ ರೀತಿಯ ನೆರವನ್ನೂ ನೀಡಿದ್ದರು.

31 ಕಿಮೀನ ಈ ಪ್ರಯಾಣದಲ್ಲಿ ಮೆಟ್ರೋ ರೈಲು ಎಂದಿನಂತೆ 55 ನಿಮಿಷಗಳಲ್ಲಿ 32 ನಿಲ್ದಾಣಗಳನ್ನು ದಾಟಿ ರಾಜರಾಜೇಶ್ವರಿ ನಗರ ತಲುಪಿತ್ತು. ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದ 24 ವರ್ಷದ ಯುವಕನ ಹೃದಯ, ಯಕೃತ್‌ ಮತ್ತಿತರ ಅಂಗಾಂಗ ದಾನಕ್ಕೆ ಯುವಕನ ಕುಟುಂಬ ಶ್ರೇಷ್ಟ ನಿರ್ಧಾರ ಕೈಗೊಂಡು ಸಮ್ಮತಿ ಸೂಚಿಸಿತ್ತು.

ರಾಜರಾಜೇಶ್ವರಿ ನಗರದ ಸ್ಪರ್ಶ್‌ ಆಸ್ಪತ್ರೆಯ 30 ವರ್ಷದ ರೋಗಿಯೊಬ್ಬರು ತೀವ್ರ ಪ್ರಮಾಣದ ಹೆಪಟೈಟಿಸ್‌ನಿಂದಾಗಿ ಯಕೃತ್‌ ವೈಫಲ್ಯದಿಂದ ಯಕೃತ್‌ ಕಸಿಗಾಗಿ ಕಳೆದ ಎರಡು ತಿಂಗಳಿನಿಂದ ನಿರೀಕ್ಷೆಯಲ್ಲಿದ್ದರು. ದಾನಿಯ ಯಕೃತ್‌ ಮತ್ತು ರೋಗಿಯ ಯಕೃತ್‌ ಹೊಂದಾಣಿಕೆಯಾಗುತ್ತಿದ್ದುದರಿಂದ ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್‌ ವೈದ್ಯರ ತಂಡ ಯಕೃತ್‌ ಅಂಗಾಗ ಕಸಿ ಹಿರಿಯ ಸಮಾಲೋಚಕ ಡಾ.ಮಹೇಶ್‌ ಗೋಪಸೆಟ್ಟಿ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಯಕೃತ್‌ ಕಸಿ ನೆರವೇರಿಸಿದ್ದು ಇದೀಗ ರೋಗಿಯು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ನಮ್ಮ ಮೆಟ್ರೋ, ಕರ್ನಾಟಕ ಅಂಗಾಂಗ ಕಸಿ ಪ್ರಾಧಿಕಾರ ಸೊಟ್ಟೋ ಹಾಗೂ ಸ್ಪರ್ಶ್‌ ಆಸ್ಪತ್ರೆಯ ನುರಿತ ವೈದ್ಯರು ಹಾಗೂ ತಂಡದ ಸಮನ್ವಯದಿಂದ ಇದು ಸಾಧ್ಯವಾಗಿದೆ.

ಮೆಟ್ರೋದಲ್ಲಿ ಮೊದಲು

ದಿನಂಪ್ರತಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುವ ನಮ್ಮ ಮೆಟ್ರೋ ಶುಕ್ರವಾರ ಇದೇ ಮೊದಲ ಬಾರಿಗೆ ಅಂಗಾಂಗ ಸಾಗಣೆಗೆ ಸಾಕ್ಷಿಯಾಯಿತು.ಸಂಜೆಯ ಸಂಚಾರ ದಟ್ಟಣೆಯಿಂದಾಗಿ ರಸ್ತೆ ಮಾರ್ಗದ ಮೂಲಕ ಯಕೃತ್‌ ಸಾಗಣೆಗೆ ಕನಿಷ್ಟ 3ರಿಂದ 4 ಗಂಟೆಗಳ ಕಾಲ ತಗಲುತ್ತಿತ್ತು. ಮತ್ತು ಭಾರೀ ದಟ್ಟಣೆಯ ಈ ಅವಧಿಯಲ್ಲಿ ಗ್ರೀನ್‌ ಕಾರಿಡಾರ್‌ ಮಾಡುವುದು ಕಠಿಣ ಸವಾಲಾಗಿತ್ತು. ಹೀಗಾಗಿ ಮೆಟ್ರೋ ಮೂಲಕ ಯಕೃತ್‌ ಸಾಗಿಸುವ ನಿರ್ಧಾರಕ್ಕೆ ಮೆಟ್ರೋ ತಕ್ಷಣವೇ ಸ್ಪಂದಿಸಿ ಅನುಮತಿ ನೀಡಿತು.

ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಿಂದ ಸುಮಾರು 5.5 ಕಿಮೀ ದೂರದಲ್ಲಿರುವ ಕಾಡುಗೋಡಿ ಮೆಟ್ರೋ ನಿಲ್ಧಾಣಕ್ಕೆ ಗ್ರೀನ್‌ ಕಾರಿಡಾರ್‌ ಮೂಲಕ ಯಕೃತ್‌ನ್ನು ಸಾಗಿಸಲಾಯಿತು. ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ತಲುಪುತ್ತಿದ್ದಂತೆ ಯಕೃತ್‌ನ್ನು ಮತ್ತೆ ಗ್ರೀನ್‌ ಕಾರಿಡಾರ್‌ ಮೂಲಕ 2.5 ಕಿಮೀ ದೂರದ ಸ್ಪರ್ಶ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.

ಮೆಟ್ರೋ ತನ್ನ ನೇರಳೆ ಮಾರ್ಗದ ಕೊನೆಯ ಬೋಗಿಯನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಲ್ಲದೇ ಅತ್ಯಂತ ಜನದಟ್ಟಣೆಯ ಸಂಚಾರ ಸಮಯದಲ್ಲಿ ದಿನ ನಿತ್ಯದ ಪ್ರಯಾಣಿಕರಿಗೆ ಒಂದಿಷ್ಟೂ ಅಡಚಣೆ ಆಗದಂತೆ ಸುವ್ಯವಸ್ಥಿತ ಕ್ರಮ ಕೈಗೊಂಡಿತ್ತು. ಎರಡೂ ನಿಲ್ದಾಣಗಳ ಎಲವೇಟರ್‌ ಮತ್ತು ಲಿಫ್ಟ್‌ಗಳನ್ನು ಕಾದಿರಿಸಿ ಯಕೃತ್‌ ಸಾಗಣೆಗೆ ಅನುವು ಮಾಡಿಕೊಟ್ಟಿತು.

ಮೆಟ್ರೋ ನಿರ್ದೇಶಕ ಸುಮಿತ್‌ ಭಟ್ನಾಗರ್‌, ಮುಖ್ಯ ಸುರಕ್ಷತಾ ಅಧಿಕಾರಿ ಸೆಲ್ವಮ್‌ ಹಾಗೂ ಮೆಟ್ರೋ ಕಾರ್ಯಾಚರಣೆ ಮುಖ್ಯಸ್ಥ ರಂಗಪ್ಪ ಅವರ ಉಸ್ತುವಾರಿಯಲ್ಲಿ ಯಕೃತ್‌ ಸಾಗಣೆ ಕೈಗೊಳ್ಳಲಾಗಿತ್ತು. ಸುರಕ್ಷತಾ ಅಧಿಕಾರಿ ಸೆಲ್ವಮ್‌ ಅವರು ಕಾಡುಗೋಡಿ ನಿಲ್ದಾಣದಿಂದ ಸ್ಪರ್ಶ್‌ ಆಸ್ಪತ್ರೆ ರಾಜರಾಜೇಶ್ವರಿ ನಗರದ ವರೆಗೂ ಸ್ಪರ್ಶ್‌ ತಂಡದೊಂದಿಗಿದ್ದು ಒಂದಿನಿತೂ ಅಡಚಣೆ ಆಗದಂತೆ ಕ್ರಮ ಕೈಗೊಂಡಿದ್ದರು.

ನಗರದ ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿರುವ ಮೆಟ್ರೋ ಇದೀಗ ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಪರ್ಶ್‌ ಆಸ್ಪತ್ರೆ ಆರ್‌ ಆರ್‌ನಗರದ ಸಿಇಒ ಕರ್ನಲ್‌ ರಾಹುಲ್‌ ತಿವಾರಿ ನಮ್ಮ ಮೆಟ್ರೋ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುವವರ ಜೀವದ ಜೀವನಾಡಿಯಾಗಿಯೂ ಶ್ಲಾಘನೀಯ ಕೆಲಸ ಮಾಡಿದೆ.

ಅಂಗಾಂಗ ದಾನಿಗಳು ನೀಡುವ ಅಂಗವನ್ನು ಅಂಗಾಂಗ ಕಸಿ ಮಾಡಿಸಿಕೊಳ್ಳುವವರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪಿಸುವಲ್ಲಿ ಮೆಟ್ರೋ ನೆರವಾಗುವ ಮೂಲಕ ಜೀವದಾನಕ್ಕೆ ನೆರವಾಗಿದೆ ಎಂದರು. ನಾಗರಿಕ ಸಂಚಾರ ವ್ಯವಸ್ಥೆ- ನಮ್ಮ ಮೆಟ್ರೋ, ವೈದ್ಯಕೀಯ ವ್ಯವಸ್ಥೆ ಹಾಗೂ ಮಾನವೀಯತೆ ಸಮನ್ವಯತೆ ಸಾಧಿಸಿದಾಗ ಮಾಡಬಹುದಾದ ಸಾಧನೆಗೆ ಈ ಉಪಕ್ರಮ ಸಾಕ್ಷಿಯಾಗಿದೆ ಎಂದು ಸ್ಪರ್ಶ್‌ ಆಸ್ಪತ್ರೆ ಯಕೃತ್‌ ಕಸಿ ಚಿಕಿತ್ಸೆಯ ಹಿರಿಯ ಸಮಾಲೋಚಕ ಡಾ.ಮಹೇಶ್‌ಗೋಪಸೆಟ್ಟಿ ಅಭಿಪ್ರಾಯಪಟ್ಟರು.

Related Posts

Leave a Reply

Your email address will not be published. Required fields are marked *