ಬಾಗಲಕೋಟೆ/ ಮಹಾಲಿಂಗಪುರ: ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಬಳಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರ್ಯಾಲಿ ಹಾಗೂ ವಾಹನಗಳಿಗೆ ಬೆಂಕಿಗೆ ಹಾಕಿದ ಪ್ರಕರಣ ಕುರಿತು ತನಿಖೆಗೆ ಆದೇಶ ಮಾಡಲಾಗುವುದು ಹಾಗೂ ಹಾನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ದುರಂತದ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೊಂದಿಗೆ ಭೇಟಿ ನೀಡಿ ದುರಂತದಲ್ಲಿ ಹಾನಿಗೀಡಾದ ಕಬ್ಬು, ಟ್ರ್ಯಾಕ್ಟರ್ ಗಳು, ಬೈಕ್ ಗಳನ್ನು ವೀಕ್ಷಣೆ ಮಾಡಿ ರೈತರ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರ್ಕಾರದಿಂದ ಇಲ್ಲವೇ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದರು.
ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದರಿಂದಲೇ ಈ ಹಂಗಾಮಿನಲ್ಲಿ ಇಳುವರಿ ಲೆಕ್ಕಾಚಾರ ಮಾಡದೆ ಪ್ರತಿ ಟನ್ ಕಬ್ಬಿಗೆ ಸರಾಸರಿ 200ರಿಂದ 250 ರೂ. ಹೆಚ್ಚುವರಿ ಕೊಡಿಸಲು ಸಫಲವಾಗಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರಂಗರಾಜನ್ ಸಮಿತಿಯ ವರದಿ ಪ್ರಕಾರ ಬೆಳೆಗಾರರಿಗೆ 70:30 ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ7.3 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ (5.67 ಲಕ್ಷ ಹೆಕ್ಟೇರ್) ಇದೆ. ಕ್ರಷಿಂಗ್ ವಿಳಂಬವಾದರೆ ಸಕ್ಕರೆ ಇಳುವರಿ ಕಡಿಮೆಯಾಗುವುದಷ್ಟೇ ಅಲ್ಲ, ರೈತರಿಗೂ ಸಮಸ್ಯೆಯಾಗಲಿದೆ. ತೂಕ ಕಡಿಮೆಯ ಜೊತೆಗೆ ಮುಂದಿನ ಹಂಗಾಮು ವ್ಯತ್ಯಯವಾಗಲಿದೆ. ಹೀಗಾಗಿ ಕ್ಷಷಿಂಗ್ ಸುಗಮವಾಗಿ ನಡೆಯಲು ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರೈತರ ಹೋರಾಟವನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ. ಈ ಘಟನೆಯಿಂದ ಕೆಲವು ಕಾರ್ಖಾನೆಗಳು ಕ್ರಷಿಂಗ್ ಆರಂಭಿಸಲು ಹಿಂದೇಟು ಹಾಕಿದ್ದು, ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ, ಉಪವಿಭಾಗಾಧಿಕಾರಿ ಶ್ವೇತಾ ಬೇಡ್ಕರ್, ಕಬ್ಬು ನಿಯಂತ್ರಣ ಮಂಡಳಿಯ ಸದಸ್ಯ ರಂಗನಗೌಡ ಪಾಟೀಲ, ಗೋದಾವರಿ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಬಕ್ಷಿ ಇದ್ದರು.


