Menu

ಮಾವುತ ಗುಂಡ, ಕಾವಾಡಿ ನಂಜುಂಡಸ್ವಾಮಿಗೆ ಅರ್ಜುನ ಆನೆ ಪ್ರಶಸ್ತಿ ಪ್ರಕಟ

arjuna elefent award

ಬೀದರ್: ಮಾವುತ ಗುಂಡ‌ ಹಾಗೂ ಕಾವಾಡಿ ನಂಜುಂಡಸ್ವಾಮಿ ಅರಣ್ಯ ಇಲಾಖೆ ನೂತನವಾಗಿ ಜಾರಿ ಮಾಡಿರುವ ಅರ್ಜುನ‌ ಆನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಗಸ್ಟ್ 4ರಂದು ಹುಣಸೂರು ತಾಲೂಕಿನ‌ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜ ಪಯಣದ ಸಂದರ್ಭದಲ್ಲಿ 2025ರ ಸಾಲಿನ ‘ಅರ್ಜುನ ಆನೆ’ ಪ್ರಶಸ್ತಿ ಪ್ರದಾನ ನಡೆಯಲಿದೆ.

ಹಾಸನ, ಸಕಲೇಶಪುರ, ಕೊಡಗು ಮೊದಲಾದ ಕಡೆಗಳಲ್ಲಿ ಆನೆ ಮತ್ತು ವನ್ಯಜೀವಿ ಸೆರೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗಿಯಾಗಿರುವ ಭೀಮ ಆನೆಯ ಮಾವುತ ಗುಂಡ ಹಾಗೂ ಕಾವಾಡಿ ನಂಜುಂಡಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೀದರ್​​ನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ‘ಹಾಸನದ ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸಲಾಗಿದೆ. ಆ. 4 ಗಜಪಯಣದ ವೇಳೆ ಮಾವುತ/ ಸಿಬ್ಬಂದಿಗೆ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

ಹೆಚ್. ಡಿ. ಕೋಟೆ ಶಾಸಕ ಅನಿಲ್ ಕುಮಾರ್ ಸಿ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸುವ ಸಲಹೆ ನೀಡಿದ್ದರು. ಈ ಸಲಹೆ ಪುರಸ್ಕರಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಹಾಗೂ ವನ್ಯಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿರುವ ಹಾಗೂ ಸೆರೆಹಿಡಿಯುವ ಆನೆಗಳನ್ನು ಪಳಗಿಸಿ ಆರೈಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಾವುತ/ಸಿಬ್ಬಂದಿನ್ನು ಗುರುತಿಸಿ ಪ್ರತಿವರ್ಷ ನಡೆಯುವ ಗಜಪಯಣದ ಸಂದರ್ಭದಲ್ಲಿ ‘ಅರ್ಜುನ ಆನೆ’ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ 750 ಕೆ. ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ದೇಶದ ಜನರ ಮನ ಗೆದ್ದಿದ್ದ. ಅರಣ್ಯ ಸಿಬ್ಬಂದಿಯ ಪ್ರಾಣ ಉಳಿಸಲು ಪ್ರಾಣತ್ಯಾಗ ಮಾಡಿದ ಅರ್ಜುನನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಈ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *