ಬೆಂಗಳೂರು: ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳ ಕಳುಹಿಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇವರು ದರ್ಶನ್ ಅಭಿಮಾನಿಗಳೇ ಎಂದು ವಿಚಾರಣೆ ನಡೆಸಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ 43 ಇನ್ ಸ್ಟಾಗ್ರಾಂ ಖಾತೆಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತ್ವರಿತ ಕ್ರಮ ಕೈಗೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಉಳಿದವರಿಗೆ ಭಯ ಶುರುವಾಗಿದೆ.
ರಮ್ಯಾ ಇತ್ತೀಚೆಗೆ ರೇಣುಕಾಸ್ವಾಮಿ ಪರ ಮಾತನಾಡಿದ್ದರು. ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗ ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ಭರವಸೆ ಇದೆ’ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿತ್ತು. ದರ್ಶನ್ ಫ್ಯಾನ್ಸ್ ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಕಮೆಂಟ್ ಬಾಕ್ಸ್ನಲ್ಲಿ ಅಶ್ಲೀಲ ಕಮೆಂಟ್ಗಳನ್ನು ಮಾಡಿದ್ದರು.
ಇಷ್ಟಕ್ಕೆ ನಿಲ್ಲಿಸದೆ ರಮ್ಯಾಗೆ ಕೆಟ್ಟ ಕೆಟ್ಟ ಮೆಸೇಜ್ಗಳನ್ನು ಕಳುಹಿಸಿದ್ದರು. ಇದನ್ನು ಸಹಿಸಿಕೊಳ್ಳದ ರಮ್ಯಾ ಅವರು ಹೋಗಿ ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಸಿಸಿಬಿ ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಓರ್ವ, ಚಿತ್ರದುರ್ಗ ಮೂಲದ ಓರ್ವನ ಬಂಧನ ಆಗಿದೆ.