ನಾಯಿ ಕಚ್ಚಿ ಮೂರು ತಿಂಗಳಾದ ಬಳಿಕ ಯುವಕನೊಬ್ಬ ರೇಬಿಸ್ಗೆ ಬಲಿಯಾಗಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಅಯ್ಯಪ್ಪನ್ ಮೃತಪಟ್ಟ ಯುವಕ. ಮೂರು ತಿಂಗಳ ಆತನಿಗೆ ನಾಯಿ ಕಚ್ಚಿತ್ತು. ಆದರೆ ನಿರ್ಲಕ್ಷಿಸಿದ ಆತ ಚಿಕಿತ್ಸೆ ಪಡೆದಿರಲಿಲ್ಲ. ನಾಯಿ ಕಚ್ಚಿದ ಮೂರು ತಿಂಗಳ ರೇಬಿಸ್ನಿಂದ ಪ್ರಾಣ ಕಳೆದುಕೊಂಡಿದ್ದಾನೆ.
ಅಯ್ಯಪ್ಪನ್ ಕಾವಲ್ ಕಿನಾರು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾಗ ನಾಯಿ ಕಚ್ಚಿತ್ತು, ಆದರೆ ಅವರು ನಿರ್ಲಕ್ಷಿಸಿ ಯಾವುದೇ ಚಿಕಿತ್ಸೆ, ಲಸಿಕೆ ಪಡೆದಿರಲಿಲ್ಲ, ಮೂರು ತಿಂಗಳ ನಂತರ ರೇಬೀಸ್ಗೆ ಬಲಿಯಾಗಿದ್ದಾರೆ. ಅಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಾ. ಲಿಯೋ ಡೇವಿಡ್ ಅವರು ಅಯ್ಯಪ್ಪನ್ ರೇಬೀಸ್ನಿಂದಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ವ್ಯಕ್ತಿ ನಿರಂತರ ಚಡಪಡಿಸುತ್ತಿದ್ದು, ನುಂಗಲು ಸಾಧ್ಯವಾಗುತ್ತಿರಲಿಲ್ಲ, ಆತನನ್ನು ಅಸರಿಪಲ್ಲಂನ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮೊದಲು ಎರಡು ಖಾಸಗಿ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು. ಯಾರಲ್ಲಾದರೂ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯುವ ಸಾಧ್ಯತೆಗಳು ವಿರಳ. ರೇಬೀಸ್ ಸೋಂಕು ಕಾಣಿಸಿಕೊಂಡ 7 ರಿಂದ 14 ದಿನಗಳಲ್ಲಿ ಸೋಂಕಿತ ವ್ಯಕ್ತಿ ಮೃತಪಡುತ್ತಾರೆ. ನಾಯಿ ಅಥವಾ ಇತರ ಸಾಕು ಪ್ರಾಣಿಗಳು ಕಚ್ಚಿದ ಕೂಡಲೇ ಗಾಯವನ್ನು ತೊಳೆಯುವುದು ಹಾಗೂ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯ. ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ (PEP) ಚುಚ್ಚುಮದ್ದು ಪಡೆದರೆ ರೋಗವನ್ನು 100% ತಡೆಯಲು ಸಾಧ್ಯವಿದೆ. ರೇಬೀಸ್ ಲಕ್ಷಣಗಳಿರುವ ನಾಯಿಗಳನ್ನು ಪ್ರತ್ಯೇಕಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ ಮತ್ತು ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಆರಂಭಿಸಿದ ಸಮಯದಲ್ಲೇ ಅಯ್ಯಪ್ಪನ್ ರೇಬಿಸ್ಗೆ ಬಲಿಯಾಗಿದ್ದಾರೆ.
ರೇಬೀಸ್ ಇದ್ದ ನಾಯಿ ಕಚ್ಚಿದ ನಂತರ ಗಾಯದ ಮೂಲಕ ವೈರಸ್ ನರಗಳ ಮೂಲಕ ಮೆದುಳಿಗೆ ಸಾಗುತ್ತದೆ. ಮನುಷ್ಯನಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ವೈರಸ್ ನರಮಂಡಲವನ್ನು ತೀವ್ರವಾಗಿ ಹಾನಿಗೊಳಿಸಿರುತ್ತದೆ. ರೇಬೀಸ್ ಶಂಕಿತ ಪ್ರಾಣಿಯಿಂದ ಕಡಿತಕ್ಕೊಳಗಾದರೆ ಗಾಯವನ್ನು ತಕ್ಷಣವೇ ಸೋಪ್ ಮತ್ತು ನೀರಿನಿಂದ ತೊಳೆದು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಮನೆಯ ಸಾಕು ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು.


