ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ವೃದ್ಧರೊಬ್ಬರ ಶವವೊಂದು ಪತ್ತೆಯಾಗಿದ್ದು, ಮೃತರನ್ನು ಸ್ವಾಮಿ (70) ಎಂದು ಗುರುತಿಸಲಾಗಿದೆ. ಅವರ ಮೈಮೇಲಿದ್ದ ಚಿನ್ನ ದೋಚಿ ಕೊಲೆ ಮಾಡಲಾಗಿದೆ ಎಂದು ಪತ್ನಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಬಳಿ ಬಿದ್ದಿದ್ದ ಸ್ವಾಮಿಯ ಶವವನ್ನು ನೋಡಿದ್ದ ಪತ್ನಿ, ಮೈಮೇಲಿನ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗಮನಿಸಿದ್ದರು, ಶವದ ಕುತ್ತಿಗೆಯ ಸುತ್ತ ಟವೆಲ್ ಸುತ್ತಿದ್ದು, ಅದು ಸ್ವಾಮಿಯದು ಅಲ್ಲವೆಂದು ತಿಳಿದ ಮೇಲೆ ಪೊಲೀಸರ ಬಳಿ ಹೋಗಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ತೊಂಡವಾಡಿ ಗ್ರಾಮದ ನಿವಾಸಿ ಪರಶಿವಮೂರ್ತಿ, ಸಿದ್ದರಾಜು ಹಾಗೂ ಬೆಲಚಲವಾಡಿ ಗ್ರಾಮದ ಮಹೇಶ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸ್ವಾಮಿಯಿಂದ ಆರೋಪಿ ಪರಶಿವಮೂರ್ತಿ ಹತ್ತು ಸಾವಿರ ಸಾಲ ಪಡೆದಿದ್ದ. ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕೆ ಸ್ನೇಹಿತರೊಡನೆ ಸೇರಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಬಂಧಿತರಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರದಂದು ಮನೆಯಿಂದ ಹೊರಗೆ ಹೋಗಿದ್ದ ಸ್ವಾಮಿ ಕತ್ತಲಾದರೂ ವಾಪಾಸ್ ಆಗದ ಕಾರಣ ಪತ್ನಿ ಆತಂಕಗೊಂಡು ಹುಡುಕಾಡಿದ್ದರು. ಸ್ವಾಮಿಯ ಸುಳಿವು ಸಿಕ್ಕಿರಲಿಲ್ಲ. ಮಗ ಸೋಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮರುದಿನ ಬೆಳಿಗ್ಗೆ ಕರೆ ಮಾಡಿದ್ದ ಸೋಮ, ಸ್ವಾಮಿ ಕಮರಹಳ್ಳಿ ಗ್ರಾಮದ ಜಮೀನಿನ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಬಳಿ ಕೊಲೆಯಾಗಿದ್ದಾರೆಂದು ತಿಳಿಸಿದ್ದ.
ಸ್ಥಳಕ್ಕೆ ಧಾವಿಸಿದ ಪತ್ನಿ ಶವದ ಕುತ್ತಿಗೆಯನ್ನು ಟವೆಲ್ ನಿಂದ ಬಿಗಿದಿರುವುದನ್ನು ಹಾಗೂ ಧರಿಸಿದ್ದ 100 ಗ್ರಾಂ ಗೂ ಅಧಿಕ ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿದ್ದರು.


