ಮಧ್ಯಮ ವೇಗಿ ಗಸ್ ಅಟ್ಕಿಸನ್ ದಾಳಿಗೆ ತತ್ತರಿಸಿದ ಭಾರತ ತಂಡ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 224 ರನ್ ಗಳ ಸಾಧಾರಣ ಮೊತ್ತಕ್ಕೆ ಆಲೌಟಾಗಿದೆ.
ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 6 ವಿಕೆಟ್ ಗೆ 204 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮಕ್ಕೂ ಮುನ್ನವೇ 224 ರನ್ ಗೆ ಪತನಗೊಂಡಿದೆ.
ನಿನ್ನೆಯ ಮೊತ್ತಕ್ಕೆ ಕೇವಲ 20 ರನ್ ಪೇರಿಸುವಷ್ಟರಲ್ಲಿ ಉಳಿದ 4 ವಿಕೆಟ್ ಕಳೆದುಕೊಂಡಿತು. ಅದರಲ್ಲೂ ಕೊನೆಯ 4 ವಿಕೆಟ್ ಗಳು 6 ರನ್ ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.
ನಿನ್ನೆ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕರಣ್ ನಾಯರ್ 109 ಎಸೆತಗಳಲ್ಲಿ 8 ಬೌಂಡರಿ ಸೇರಿದ 57 ರನ್ ಬಾರಿಸಿ ಔಟಾದರೆ, ವಾಷಿಂಗ್ಟನ್ ಸುಂದರ್ 26 ರನ್ ಬಾರಿಸಿ ಔಟಾದರು. ವೇಗಿ ಆಟ್ಕಿಸನ್ 5 ವಿಕೆಟ್ ಪಡೆದು ಮಿಂಚಿದರೆ, ಜೋಶ್ ಟಂಗ್ 3 ವಿಕೆಟ್ ಕಬಳಿಸಿದರು.
ನಂತರ ಕಣಕ್ಕಿಳಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್ ಗಳಿಸಿದ್ದು, ಮುನ್ನಡೆ ಪಡೆಯಲು ಕೇವಲ 115 ರನ್ ಬೇಕಾಗಿದೆ.
ಭಾರತ ತಂಡ ಈಗಾಗಲೇ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರಿಂದ ಹಿನ್ನಡೆ ಅನುಭವಿಸಿದ್ದು, ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ಕನಿಷ್ಠ ಈ ಪಂದ್ಯ ಗೆಲ್ಲಲೇಬೇಕಾಗಿದೆ.