ಗ್ರೇಟರ್ ಬೆಂಗಳೂರು ಪಾಲಿಕೆಗೆ ನವೆಂಬರ್ನಲ್ಲಿ ಚುನಾವಣೆ ನಡೆಸುತ್ತೇವೆಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ನವೆಂಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ. ಅಗತ್ಯವಿದ್ದರೆ ನವೆಂಬರ್ ಒಳಗೂ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಅಷ್ಟರಲ್ಲಿ ಲಿಖಿತ ದಾಖಲೆಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಾಲ್ಯ ಬಾಗ್ಚಿ ಅವರಿರುವ ಪೀಠವು ಹಿರಿಯ ವಕೀಲ ಎ.ಎಂ ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿದೆ.
ಬಿಬಿಎಂಪಿ ವಾರ್ಡ್ ವಿಭಜನೆ, ಗಡಿ ನಿರ್ಣಯ, ಪರಿಷ್ಕರಣೆ, ಮೀಸಲಾತಿ ಮತ್ತು ಮತದಾರರ ಪಟ್ಟಿಯ ಸಿದ್ಧತೆಗೆ ಸಂಬಂಧಿಸಿದಂತೆ ದಾಖಲೆಗಳು ಅಫಿಡವಿಟ್‌ನಲ್ಲಿ ಇವೆ. ನವೆಂಬರ್ ವೇಳೆಗೆ ಎಲ್ಲ ಪ್ರಕ್ರಿಯೆ ಮುಗಿಸುವುದಾಗಿ ಮಾಹಿತಿ ನೀಡಿದ್ದು, ಈಗಾಗಲೇ ಶೇ. 50 ರಷ್ಟು ಕ್ರಮಗಳು ಪೂರ್ಣಗೊಂಡಿವೆ ಎಂದು ತಿಳಿಸಲಾಗಿದೆ. ಈ ಹಿಂದಿನ ಬಿಬಿಎಂಪಿಯ ಸದಸ್ಯರ ಅಧಿಕಾರ ಅವಧಿ 2020 ಸೆಪ್ಟೆಂಬರ್ 10ರಂದು ಮುಕ್ತಾಯಗೊಂಡಿತ್ತು.
ಡಿಸೆಂಬರ್ 18ರಂದು ಅಂಗೀಕರಿಸಲಾದ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ, 2020ರ ಅಡಿ ಕಡ್ಡಾಯವಾಗಿ 243 ವಾರ್ಡ್‌ಗಳ ಬದಲಿಗೆ 198 ವಾರ್ಡ್‌ಗಳಿಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.