ಕೊಪ್ಪಳದ ಬುದಗೂಂಪದಲ್ಲಿ ಮಹಿಳೆಯೊಬ್ಬಳು ಮೂವರು ಮಕ್ಕಳ ತಂದೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಅದಕ್ಕೆ ಅಡ್ಡಿಯಾಗುತ್ತಾನೆಂದು ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಸುಟ್ಟು ಹಾಕಿದ್ದಲ್ಲದೆ ಬಳಿಕ ನಾಗರ ಪಂಚಮಿ ಹಬ್ಬವನ್ನೂ ಆಚರಿಸಿದ್ದಾಳೆ.
ಗಂಡನ ಮನೆಯವರು ವಿಚಾರಿಸಿದಾಗ ಆತ ಧರ್ಮಸ್ಥಳಕ್ಕೆ ಹೋಗಿರುವುದಾಗಿ ಕತೆ ಕಟ್ಟಿದ್ದಾಳೆ. ದ್ಯಾಮಣ್ಣ ವಜ್ರಬಂಡಿ (38) ಕೊಲೆಯಾದ ವ್ಯಕ್ತಿ. ಆತನ ಪತ್ನಿ ನೇತ್ರಾವತಿ ಪ್ರಿಯಕರ ಶಾಮಣ್ಣ ಜೊತೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿದಾಕೆ.
ಜುಲೈ 25ರಂದು ಆಕೆ ಗಂಡನನ್ನು ಕೊಲೆ ಮಾಡಿದ್ದು ತಡವಾಗಿ ಬಹಿರಂಗಗೊಂಡಿದೆ. ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಪೆಟ್ರೋಲ್ ಸುರಿದು ಶವ ಸುಟ್ಟು ಹಾಕಿದ್ದಳು. ಆರೋಪಿ ಶ್ಯಾಮಣ್ಣ ಕಾಮನೂರ ನಿವಾಸಿ. ಅದೇ ಗ್ರಾಮದ ನೇತ್ರಾವತಿಗೆ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿತ್ತು. ನೇತ್ರಾವತಿ ಹಾಗೂ ಶ್ಯಾಮಣ್ಣ ನಡುವೆ ಅಕ್ರಮ ಸಂಬಂಧ ಇತ್ತು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ್ದಾಳೆ.
ಜುಲೈ 25ರಂದು ಪತಿಯ ಕೊಲೆ ಮಾಡಿದ್ದ ನೇತ್ರಾವತಿ 5 ದಿನ ಮನೆಯಲ್ಲೇ ಇದ್ದಳು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ದ್ಯಾಮಣ್ಣನ ಮನೆಯವರು ವಿಚಾರಿಸಿದಾಗ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಬಳಿಕ ನೇತ್ರಾವತಿ ಸತ್ಯ ಒಪ್ಪಿಕೊಂಡಿದ್ದಾಳೆ. ನೇತ್ರಾವತಿ ಹಾಗೂ ಶ್ಯಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆ ಕೊಪ್ಪಳ ಮುನಿರಾಬಾದ್ ಪೊಲೀಸರೇ ಶವ ಸಂಸ್ಕಾರ ಮಾಡಿದ್ದರು. ಗುರುವಾರ ವಿಷಯ ತಿಳಿದ ಬಳಿಕ ದ್ಯಾಮಣ್ಣ ಕುಟುಂಬಸ್ಥರು ಶವಕ್ಕೆ ಮಣ್ಣು ಹಾಕಿ ಶಾಸ್ತ್ರ ನೆರವೇರಿಸಿದ್ದಾರೆ.