ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಸ್ತೆಗಳ ಕಸ ಗುಡಿಸಲು 46 ಕಸ ಗುಡಿಸುವ ಯಂತ್ರಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆಗಳ ಕಸ ಗುಡಿಸಲು ಕಸ ಗುಡಿಸುವ ಯಂತ್ರಗಳನ್ನು ಖರೀದಿಸುವ ಬದಲು 7 ವರ್ಷದ ಅವಧಿಗೆ 46 ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದೆ.
ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಈ ಮಾಹಿತಿ ನೀಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ ಕಸಗುಡಿಸುವ ಯಂತ್ರ ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ. ಇದಕ್ಕಾಗಿ 613.25 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಸಂಪುಟ ಉಪ ಸಮಿತಿಗಳ ವರದಿಗೆ ಸೂಚನೆ
3 ಸಂಪುಟ ಉಪ ಸಮಿತಿಗಳು 6 ತಿಂಗಳು ಆದರೂ ವರದಿ ಸಲ್ಲಿಸಿದ ಕಾರಣ, ಮುಂದಿನ ಅಧಿವೇಶನಕ್ಕೂ ಮುನ್ನ ಆದಷ್ಟು ಬೇಗ ರಿಪೋರ್ಟ್ ನೀಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕೋವಿಡ್ ಹಗರಣದ ಕುರಿತು ಕುನ್ಹಾ ವರದಿಯ ಪರಿಶೀಲನೆ ಉಪ ಸಮಿತಿ, ರಾಜ್ಯದ ವಿವಿಗಳ ಆರ್ಥಿಕ ಸ್ಥಿತಿಗಳ ಪರಿಶೀಲನೆಗೆ ನೇಮಿಸಿರುವ ಡಿಸಿಎಂ ನೇತೃತ್ವದ ಉಪ ಸಮಿತಿ ಮತ್ತು ನೈಸ್ ಕಾರಿಡಾರ್ ಯೋಜನೆಯ ಅನುಷ್ಠಾನ, ಮುಂದಿನ ಯೋಜನೆಯ ಪ್ರಗತಿ ಬಗ್ಗೆ ಪರಮೇಶ್ವರ್ ನೇತೃತ್ವದ ಉಪಸಮಿತಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಡಿ. 8ರಿಂದ 19ರವರೆಗೆ ಬೆಳಗಾವಿ ಅಧಿವೇಶನ
ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ದಿನಾಂಕ ನಿಗದಿಪಡಿಸಲಾಗಿದೆ. ಡಿಸೆಂಬರ್ 8ರಿಂದ 19ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಿಎಂ ಮತ್ತು ಡಿಸಿಎಂಗೆ ಅಭಿನಂದನೆ
ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ ಆಗಿದೆ. ಮುಂದಿನ ಹೆಜ್ಜೆ ಇಡುವುದಕ್ಕಾಗಿ ಇದು ಹಸಿರು ನಿಶಾನೆ ತೋರಿಸಿದಂತಾಗಿದೆ. ಹೀಗಾಗಿ ರಾಜಕೀಯ, ಕಾನೂನಾತ್ಮಕ ಹೋರಾಟ ನಡೆಸಿದ್ದಕ್ಕಾಗಿ ಸಿಎಂ ಮತ್ತು ಡಿಸಿಎಂಗೆ ಸಂಪುಟ ಅಭಿನಂದನೆ ಸಲ್ಲಿದೆ ಎಂದೂ ಹೆಚ್.ಕೆ. ಪಾಟೀಲ್ ಹೇಳಿದರು.


