ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. 50 ಲಕ್ಷ ರೂ. ಬೆಲೆಬಾಳುವ ಇ-ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದ್ದು, 3 ಕಾರು ಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೆಲಮಂಗಲದಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಇ-ಸಿಗರೇಟ್ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಅನ್ವಯ ನೆಲಮಂಗಲ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.
ಮೂರು ಕಾರುಗಳಲ್ಲಿ ಇ-ಸಿಗರೇಟ್ ಬಾಕ್ಸ್‌ಗಳನ್ನು ಗುಪ್ತವಾಗಿ ಸಾಗಿಸಲಾಗುತ್ತಿತ್ತು. ಪೊಲೀಸರು ಚೆಕ್‌ಪೋಸ್ಟ್ ರಚಿಸಿ ಕಾರುಗಳನ್ನು ತಡೆಹಿಡಿದು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಅಡಗಿಸಲಾಗಿದ್ದ ಬಾಕ್ಸ್‌ಗಳು ಪತ್ತೆಯಾಗಿವೆ. ನಿಷೇಧಿತ ಇ-ಸಿಗರೇಟ್ ಗಳನ್ನು ದುಬೈನಿಂದ ರಹಸ್ಯವಾಗಿ ತರಲಾಗಿತ್ತು. ಭಾರತದಲ್ಲಿ ಇ-ಸಿಗರೇಟ್ ಮಾರಾಟ ಮತ್ತು ಸಾಗಾಟ ಸಂಪೂರ್ಣ ನಿಷೇಧಿಸಲಾಗಿದೆ.
ಈ ಗ್ಯಾಂಗ್ ದುಬೈನಿಂದ ತಂದು ಮಂಗಳೂರು, ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುವ ಯೋಜನೆ ರೂಪಿಸಿತ್ತು. ಬಂಧಿತರ ವಿಚಾರಣೆ ಮುಂದುವರಿದಿದೆ. ಭಾರತದಲ್ಲಿ ಇ-ಸಿಗರೇಟ್ ನಿಷೇಧ ಕಾಯ್ದೆ 2019ರಡಿ ಸಾಗಾಟ, ಮಾರಾಟ, ಉತ್ಪಾದನೆಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಬಹುದಾಗಿದೆ.


