ತೆಲಂಗಾಣದ ನಾಗರ್ಕುರ್ನೂಲ್ ಜಿಲ್ಲೆಯ ಬೊಂಡಲಪಲ್ಲಿ ಗ್ರಾಮದಲ್ಲಿ ಕುರಿಮಾಂಸದ ಕರಿ ತಿನ್ನುವಾಗ ಗಂಟಲಲ್ಲಿ ಮಾಂಸದ ತುಂಡು ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಒಬ್ಬರು ಹೊಸ ಮನೆ ಕಟ್ಟಿದ್ದು, ಆ ಸಂತೋಷಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಶ್ರಮಿಸಿದ ಕೆಲಸಗಾರರು ಮತ್ತು ಪಕ್ಕದ ಮನೆಯವರನ್ನು ಆಹ್ವಾನಿಸಲಾಗಿತ್ತು.
ಈ ಆಹ್ವಾನಿತರಲ್ಲಿ 45 ವರ್ಷದ ಲಕ್ಷ್ಮಯ್ಯ ಅವರೂ ಸೇರಿದ್ದರು. ಔತಣಕೂಟದಲ್ಲಿ ಎಲ್ಲರೂ ಊಟ ಮತ್ತು ಮದ್ಯಸೇವನೆಯಲ್ಲಿ ನಿರತರಾಗಿದ್ದರು. 45 ವರ್ಷದ ಲಕ್ಷ್ಮಯ್ಯ ಕುರಿಮಾಂಸದ ಸಾರು ಮತ್ತು ತುಂಡುಗಳನ್ನು ತಿನ್ನುತ್ತಿದ್ದರು. ತಿನ್ನುವಾಗ ಹಠಾತ್ತಾಗಿ ದೊಡ್ಡ ಮಾಂಸದ ತುಂಡು ಅವರ ಗಂಟಲಿನಲ್ಲಿ ಸಿಲುಕಿಕೊಂಡಿತು. ಲಕ್ಷ್ಮಯ್ಯ ಅವರಿಗೆ ಉಸಿರಾಡಲು ಕಷ್ಟವಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು.
ಅಲ್ಲಿದ್ದವರು ತಕ್ಷಣ ಲಕ್ಷ್ಮಯ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಗಂಟಲಿನಲ್ಲಿ ಸಿಲುಕಿದ ತುಂಡನ್ನು ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಲಕ್ಷ್ಮಯ್ಯ ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.


