ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಮುಂಗಡ ಹಣ 1.9 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ ಆರೋಪದಲ್ಲಿ ಸದಾಶಿವನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಮೂವರನ್ನು ಬಂಧಿಸಿದ್ದಾರೆ.
ಐಐಎಸ್‌ಸಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಈ ಆರೋಪಿಗಳು ದಾಖಲೆಗಳನ್ನು ನಕಲಿ ಮಾಡಿ ವಿದ್ಯಾರ್ಥಿಗಳ ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಹಣವನ್ನು ಕುಟುಂಬಸ್ಥರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳಲ್ಲಿ ದೀಪಿಕಾ ಮತ್ತು ಸೌಂದರ್ಯ ಎಂಬ ಮಹಿಳೆಯರು ಐಐಎಸ್‌ಸಿಯಲ್ಲಿ ತಾತ್ಕಾಲಿಕ ಸಹಾಯಕ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳ ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಿ, ಅಕೌಂಟ್‌ಗಳನ್ನು ಎಡಿಟ್ ಮಾಡಿ ಹಣವನ್ನು ತಮ್ಮ ಕುಟುಂಬಸ್ಥರ ಖಾತೆಗಳಿಗೆ ವರ್ಗಾಯಿಸುವ ಮೂಲಕ 1.9 ಕೋಟಿ ರೂಪಾಯಿ ಲೂಟಿ ಮಾಡಿದ್ದರು.
ಪೊಲೀಸರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ , ತಮ್ಮ ಸ್ನೇಹಿತ ಸಚಿನ್ ರಾವ್ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಪೊಲೀಸರು ಸಚಿನ್ ರಾವ್ ನನ್ನು ಬಂಧಿಸಿದ್ದಾರೆ.
ಬಂಧಿತರಿಂದ 70-80 ಲಕ್ಷ ರೂಪಾಯಿ ಬಾಳುವ ಎರಡು ಮನೆಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 15 ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನಾಭರಣಗಳು, 11 ಲಕ್ಷ ರೂಪಾಯಿ ನಗದು ಮತ್ತು 10 ಲಕ್ಷ ರೂಪಾಯಿಗಳ ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ.


