ನರಭಕ್ಷಕ ಹುಲಿಯನ್ನು ಇತ್ತೀಚೆಗಷ್ಟೇ ಬಂಧಿಸಿದ ಬೆನ್ನಲ್ಲೇ ಮತ್ತೊಂದು ಹುಲಿ ಮೈಸೂರಿನ ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷಗೊಂಡು ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಹನಗೋಡು ಹೋಬಳಿಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಹಿಂಡಗುಡ್ಲು, ಹನಗೋಡು, ಶೆಟ್ಟಹಳ್ಳಿ, ಕಚುವಿನಹಳ್ಳಿ, ದಾಸನಪುರ, ಕಲ್ಲೂರಪ್ಪನಬೆಟ್ಟ, ಕೊಳುವಿಗೆ, ನೇಗತ್ತೂರು, ಬಿ ಆರ್ ಕಾವಲು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೋಟ, ಲಕ್ಷ್ಮಣತೀರ್ಥ ಹೊಳೆ ಬಯಲು ಭಾಗದಲ್ಲಿ ಹುಲಿ ಅಡ್ಡಾಡುತ್ತಿರುವುದನ್ನು ಜನತೆ ಕಣ್ಣಾರೆ ಕಂಡು ಭಯ ಭೀತರಾಗಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕಚುವಿನಹಳ್ಳಿ ಬಳಿ ಕಾಡು ಹಂದಿಯೊಂದನ್ನು ಬೇಟೆಯಾಡಿ ತಿಂದು ಹಾಕಿದೆ. ಇದಲ್ಲದೆ ಸೋಮವಾರ ಹಿಂಡಗುಡ್ಲು ಗ್ರಾಮದ ಹೊಳೆ ಬಯಲಿನಲ್ಲಿ ಮತ್ತೊಂದು ಕಾಡಂದಿ ಬೇಟೆಯಾಡಿ ಪೂರ್ಣ ಪ್ರಮಾಣದ ಮಾಂಸವನ್ನು ತಿಂದು ಹಾಕಿದೆ
ಹನಗೋಡಿನ ಪತ್ರಕರ್ತ ಎಚ್ ಎಸ್ ವೆಂಕಟಪ್ಪ ರವರ ತೋಟದಲ್ಲಿ ಮಂಗಳವಾರ ಬೆಳಿಗ್ಗೆ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗಲು ಭಯ ಭೀತರಾಗಿದ್ದಾರೆ.
ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿ ಸೆರೆ ಹಿಡಿಯಬೇಕೆಂದು ಹಿಂಡಗುಡ್ಲುಗ್ರಾಮದ ಯ. ಶೇಖರೇಗೌಡ, ತೋಟದ ಮನೆಯ ಪಾಪೇಗೌಡ ಹಾಗೂ ಅನಗೋಡಿನ ಉದ್ಯಮಿ ಡಾ ಎಚ್ ವಿ ಕಾರ್ತಿಕ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


