ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ವೈಟ್ ವಾಶ್ ಆದ್ರೂ ಆಗಬಹುದು ಎಂದು ಮಾಜಿ ಸಚಿವ ರಾಜಣ್ಣ ಸ್ವಪಕ್ಷ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ. ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾ.ಪಂನಲ್ಲಿ ತಾಲೂಕು ಆಡಳಿತ ಹಾಗೂ ಗ್ರಾ.ಪಂ ವತಿಯಿಂದ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
2004 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದ್ದರಿಂದ ಬೇಸತ್ತು ಜೆಡಿಎಸ್‌ನಿಂದ ಗೆದ್ದು ಶಾಸಕನಾಗಿದ್ದೆ, ಈ ವೇಳೆ ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷವನ್ನು ವೈಟ್ ವಾಶ್ ಮಾಡಲಾಗಿತ್ತು. ಈಗ ಮತ್ತೆ ಅಂತಹ ಸಂದರ್ಭ ಬಂದರು ಬರಬಹುದು, ಮುಂದಿನ ದಿನದಲ್ಲಿ ಜೆಲ್ಲೆಯಲ್ಲಿ ಕಾಂಗ್ರೆಸ್ ಖಾಲಿಯಾದರು ಆಶ್ಚರ್ಯವಿಲ್ಲ ಎಂದು ರಾಜನ್ಣ ಮಾರ್ಮಿಕವಾಗಿ ಹೇಳಿದರು.
ಮಧುಗಿರಿಯಲ್ಲಿ 2004 ರಲ್ಲಿ ಕಾಂಗ್ರೆಸ್ ಪಕ್ಷ ನನ್ನ ಹೊರಗೆ ಹಾಕಿತ್ತು, ಇದರಿಂದ ನಾನು ಜೆಡಿಎಸ್ ಸೇರ್ಪಡೆಯಾಗಿದ್ದೆ. ಒಳ್ಳೆಯ ರಾಜಕಾರಣಿಗಳಿಗೆ ಕೆಲಸ ಮಾಡುವವರಿಗೆ ತೊಂದರೆ ನೀಡಿದರೆ ಅಂತಹ ಪಕ್ಷಗಳಿಗೆ ಉಳಿಗಾಲವಿರುತ್ತದೆಯೇ ಎಂದು ಪ್ರಶ್ನಿಸಿದರು. ಅಂದು ಜಿಲ್ಲೆಯಲ್ಲೆ ಕಾಂಗ್ರೆಸ್ ಬಾವುಟ ಹಿಡಿಯದಂತೆ ಮಾಡಿದ್ದೆ. ನನ್ನ ಕ್ಷೇತ್ರದ ಕಾರ್ಯಕರ್ತರು ನಡೆಸಿದ ಬೈಕ್ ರ್ಯಾಲಿಯಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಾವುಟ ಹಿಡಿದಿಲ್ಲ. ಇದು ಏಕೆಂಬುದು ನನಗೆ ತಿಳಿಯುತ್ತಿಲ್ಲ, ನಾನೇನೂ ಕಾಂಗ್ರೆಸ್ ಬಿಟ್ಟಿದ್ದೀನಿ ಅಂದ್ಕೊಂಡ್ರ ನಮ್ಮ ಕಾರ್ಯಕರ್ತರು ಎಂದು ರಾಜಣ್ಣ ಹೇಳಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ನೋಡೋಣಾ, ಯಾವ ಬಾವುಟ ಹಿಡಿಯೋಣ ಅಂತ. ಅಂತಹ ಸಂದರ್ಭ ಬಂದರೂ ಬರಬಹುದು ಎಂದು ಭವಿಷ್ಯ ನುಡಿದರು. ಬೇರೆ ಪಕ್ಷದಿಂದಲೂ ನನ್ನನ್ನು ಜನ ಗೆಲ್ಲಿಸಿದ್ದಾರೆ ಎನ್ನುವ ಮೂಲಕ ರಾಜಣ್ಣ ಪಕ್ಷದ ಮೇಲಿನ ಬೇಸರವನ್ನು ನುಂಗಲಾರದ ತುತ್ತು ಎಂಬಂತೆ ವ್ಯಕ್ತಪಡಿಸಿದರು.
ದೇವೇಗೌಡರು ಎದೆ ಬಡಿದುಕೊಂಡು ನಾಟಕ ಆಡಿದ್ರು, ನಾಟಕ ಅರಿತ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅಭೂತಪೂರ್ವ 5000 ಮತಗಳ ಅಂತರದಿಂದ ಗೆಲುವು ಕೊಟ್ಟಿದ್ದಾರೆ. ಗುಡಿಸಲು ಮುಕ್ತ ಮಧುಗಿರಿ ಮಾಡುವುದಾಗಿ ಅಂದು ಭರವಸೆ ಕೊಟ್ಟಿದ್ದೆ, ಇಂದು ಅದು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದರು.


