Thursday, November 13, 2025
Menu

ದೆಹಲಿ ಕಾರು ಬಾಂಬರ್‌ ಡಾ.ಉಮರ್‌ ನಬಿ: ಡಿಎನ್‌ಎ ಪರೀಕ್ಷೆಯಿಂದ ದೃಢ

ದೆಹಲಿ ಕಾರು ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದು ಡಾಕ್ಟರ್ ಉಮರ್ ನಬಿ ಎಂಬುದು ದೇಹದ ಡಿಎನ್ಎ ಪರೀಕ್ಷೆಯಿಂದ ಖಚಿತವಾಗಿದೆ. ಸ್ಫೋಟಕ್ಕೆ ಬಳಸಲಾದ i20 ಕಾರಿನಲ್ಲಿ ಕಂಡುಬಂದ ದೇಹದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಯನ್ನು ಡಾ. ಉಮರ್ ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಪರಿಶೀಲಿಸಿದಾಗ ಅದು ಮ್ಯಾಚ್ ಆಗಿದೆ.

ಕಾರು ಬಾಂಬ್ ಸ್ಫೋಟಿಸಿದ ಉಮರ್ ಉನ್ ನಬಿ ಮತ್ತು ಭಯೋತ್ಪಾದಕ ಘಟಕವು ಐಇಡಿಗಳನ್ನು ಬಳಸಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಬಾಂಬ್ ಇರುವ ವಾಹನಗಳಿಗೆ ಅಸಾಲ್ಟ್ ರೈಫಲ್‌ಗಳಿಂದ ಗುಂಡು ಹಾರಿಸುವ ಮೂಲಕ ಸ್ಫೋಟಿಸುವ ಯೋಜನೆ ಹೊಂದಿದ್ದರು. ಈ ಕಾರ್ಯಾಚರಣೆಗಾಗಿ ಮೂರು ವಾಹನಗಳನ್ನು ಖರೀದಿಸಿದ್ದರು ಎಂಬುದು ತಿಳಿದು ಬಂದಿದೆ.

ಐ20, ಕೆಂಪು ಫೋರ್ಡ್ ಇಕೋಸ್ಪೋರ್ಟ್ ಮತ್ತು ಬ್ರೆಝಾ ಕಾರುಗಳನ್ನು ಖರೀದಿಸಿದ್ದರು. ಐ20 ಸ್ಫೋಟಗೊಂಡಾಗ ಪೊಲೀಸರು ಇತರ ಎರಡು ಕಾರುಗಳ ಮೇಲೆ ನಿಗಾ ವಹಿಸಿದ್ದರು. ಉಗ್ರರು ಖರೀದಿಸಿದ್ದ ಇನ್ನೊಂದು ಕಾರು ಇಕೋಸ್ಪೋರ್ಟ್ ಫರಿದಾಬಾದ್‌ನಲ್ಲಿ ಪತ್ತೆಯಾಗಿದೆ. ಮತ್ತೊಂದು ಕಾರು ಬ್ರೆಝಾಗಾಗಿ ಹುಡುಕಾಟ ನಡೆಯುತ್ತಿದೆ. ಕಾರುಗಳನ್ನು ಉಮರ್ ಖರೀದಿಸಿದ್ದ ಎಂದು ಹೇಳಲಾಗಿದೆ.

ಈ ಭಯೋತ್ಪಾದಕ ಘಟಕದ ಸದಸ್ಯರು ಅಯೋಧ್ಯೆಯನ್ನು ಗುರಿಯಾಗಿಸಲು ಯೋಜನೆ ರೂಪಿಸುತ್ತಿದ್ದರು. ನವೆಂಬರ್ 25 ರಂದು ರಾಮ ಮಂದಿರದ ಮೇಲೆ ಕೇಸರಿ ಧ್ವಜ ಹಾರಿಸುವ ಸಮಯದಲ್ಲಿ ಒಂದು ಪ್ರಯತ್ನ ನಡೆಯಬೇಕಿತ್ತು ಎಂದು ಭದ್ರತಾ ಸಂಸ್ಥೆಯ ಮೂಲ ತಿಳಿಸಿದೆ. ಶಂಕಿತರು ಈ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮತ್ತು ಆರ್‌ಡಿಎಕ್ಸ್ ಮಿಶ್ರಣವನ್ನು ಬಳಸಲು ಯೋಜಿಸಿ ಸಂಗ್ರಹಿಸುತ್ತಿದ್ದರು ಎಂದು ಹೇಳಲಾಗಿದೆ.

ಉಗ್ರರ ಈ ಸಂಚು 2022 ರಲ್ಲಿ ಟರ್ಕಿಯಲ್ಲಿ ರೂಪುಗೊಂಡಿತ್ತು. ಉಮರ್ ಟರ್ಕಿ ಮೂಲದ ಹ್ಯಾಂಡ್ಲರ್ ಉಕಾಸಾ ಎಂಬ ಸಂಕೇತನಾಮದವನು ನೀಡುವ ಸೂಚನೆಗಳಂತೆ ಕಾರ್ಯ ನಿರ್ವಹಸುತ್ತಿದ್ದ ಎಂಬುದು ತಿಳಿದು ಬಂದಿದೆ.  ಪ್ರಕರಣದ ಎಲ್ಲಾ ಆರೋಪಿಗಳನ್ನು ಮಟ್ಟ ಹಾಕಲು ತನಿಖಾ ಏಜೆನ್ಸಿಗಳಿಗೆ ಗೃಹ ಸಚಿವ ಅಮಿತ್ ಷಾ ನಿರ್ದೇಶನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೂತಾನ್‌ನಿಂದ ಗೃಹ ಸಚಿವರಿಗೆ ಕರೆ ಮಾಡಿ, ತನಿಖೆಯ ಬಗ್ಗೆ ಚರ್ಚಿಸಿದ್ದಾರೆ. ಅಂಗೋಲಾದಲ್ಲಿರುವ ಅಧ್ಯಕ್ಷೆ ದ್ರೌಪದಿ ಮುರ್ಮು ಈ ಬಗ್ಗೆ ಶಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

Related Posts

Leave a Reply

Your email address will not be published. Required fields are marked *