ಬೆಂಗಳೂರಿನಲ್ಲಿ ಬಿ ಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ಎ ಖಾತೆಗೆ ಬದಲಾವಣೆ ಮಾಡಿಕೊಳ್ಳಲು ಬಿಬಿಎಂಪಿಯಿಂದ ಶೀಘ್ರದಲ್ಲೇ ಆನ್ ಲೈನ್ ಸೇವೆ ಆರಂಭಗೊಳ್ಳಲಿದೆ.
ಆಸ್ತಿ ಮಾಲೀಕರಿಗೆ ಎ ಖಾತಾಗೆ ಪರಿವರ್ತಿಸಿ ಕೊಡುವ ಬಗ್ಗೆ ಇತ್ತೀಚೆಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿತ್ತು. ಇದೀಗ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಹೊಸ ಆನ್ಲೈನ್ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.
ಫಲಾನುಭವಿಗಳು ಮನೆಯಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಎ ಖಾತಾಗೆ ಅಪ್ಗ್ರೇಡ್ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಖಾತಾ ವರ್ಗಾವಣೆಗೆ ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ.
ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಯು ಭೂಮಿ ಆಸ್ತಿಗೆ ಮಾತ್ರ ಅನ್ವಯವಾಗಲಿದೆ. ಅಕ್ರಮ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ. ಯಾಕೆಂದರೆ, ಕಟ್ಟಡಗಳಿಗೆ ಸಂಬಂಧಿಸಿದ ಅಕ್ರಮ ಸಕ್ರಮ ಯೋಜನೆ ಸದ್ಯ ಸುಪ್ರೀಂ ಕೋರ್ಟ್ ತಡೆಯಾಜ್ಞೆಯಿಂದಾಗಿ ಸ್ಥಗಿತಗೊಂಡಿದೆ.
ಎರಡು ವಾರದಲ್ಲಿ ಅರ್ಜಿ ಸಲ್ಲಿಕೆ ಶುರು
ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರ ಪ್ರಕಾರ, ಮುಂದಿನ ಎರಡು ವಾರಗಳಲ್ಲಿ ಡಿಜಿಟಲ್ ಸೇವೆ ಕಾರ್ಯಾರಂಭ ಮಾಡಲಿದೆ.
ಆರಂಭದಲ್ಲಿ, ಕಂದಾಯ ನಿವೇಶನಗಳು, ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲಾಗುವ ಆದರೆ ಇನ್ನೂ ಸಂಪೂರ್ಣವಾಗಿ ದಾಖಲೆಗಳನ್ನು ಹೊಂದಿರದ ಭೂಮಿ ಆಸ್ತಿಯನ್ನು ಪರಿಗಣಿಸಲಾಗುವುದು. ಅಧಿಕೃತ ಅನುಮೋದನೆ ಇಲ್ಲದ ಲೇಔಟ್ಗಳಲ್ಲಿನ ಕೆಲವು ಪ್ಲಾಟ್ಗಳನ್ನು ಮಾತ್ರ ಪರಿಗಣಿಸಲಾಗುವುದು.
ನಾನ್ ಕಾಂಪ್ಲಿಯೆಂಟ್ (ಸಂಬಂಧಿತ ಕಟ್ಟಡ ನಿಯಮಗಳು, ಸಂಹಿತೆಗಳು ಅಥವಾ ಮಾನದಂಡಗಳ ಅವಶ್ಯಕತೆಗಳನ್ನು ಪೂರೈಸದ್ದು) ಕಟ್ಟಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಂತರ ಪರಿಹರಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ.