ಆಸ್ತಿ ಮೇಲಿನ ಆಸೆಗಾಗಿ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡಿದ್ದ ಸಾಕು ತಾಯಿಯನ್ನೇ ಕೊಲೆಗೈದಿದ್ದ ಪಾಪಿ ಸಾಕು ಮಗಳನ್ನು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಎನ್ ಆರ್ ಪುರ ತಾಲೂಕಿನ ಬಂಡಿಮಠ ಗ್ರಾಮದ ಕುಸುಮ (62) ಅವರನ್ನು ಕೊಲೆಗೈದ 35 ವರ್ಷದ ಮಗಳು ಸುಧಾ ಎಂಬಾಕೆಯನ್ನು ಬಂಧಿಸಲಾಗಿದೆ.
ರಾತ್ರಿ ವೇಳೆ ಮಲಗಿದ್ದ ಸಾಕು ತಾಯಿ ಕುಸುಮಾ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದನ್ನು ಪೊಲೀಸರ ವಿಚಾರಣೆಯಲ್ಲಿ ಸುಧಾ ಬಾಯ್ಬಿಟ್ಟಿದ್ದಾಳೆ.
ಕುಸುಮ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದವರಾಗಿದ್ದು, ಬದುಕಿಗಾಗಿ ಬಾಳೆಹೊನ್ನೂರಿನ ಬಂಡಿಮಠದಲ್ಲಿ ವಾಸವಿದ್ದು,ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು.
ಪತಿ ಬಿಟ್ಟು ಹೋಗಿದ್ದರಿಂದ ಒಬ್ಬಂಟಿ ಜೀವನ ನಡೆಸುತ್ತಿದ್ದ ಕುಸುಮಾ ಆಸರೆಯಾಗಲೆಂದು ತಂಗಿಯ ಮಗಳನ್ನೇ ತಂದು ಸ್ವಂತ ಮಗಳಂತೆ ಬೆಳೆಸಿದ್ದರು.
ಸಾಕು ಮಗಳನ್ನು ಮೈಸೂರಿಗೆ ಮದುವೆ ಮಾಡಿಕೊಟ್ಟು, ಎನ್.ಆರ್. ಪುರದಲ್ಲಿ ತಮಗೆ ಇದ್ದ ಒಂದೂವರೆ ಎಕರೆ ಕಾಫಿ ತೋಟವನ್ನು ಸುಧಾಳ ಹೆಸರಿಗೆ ವಿಲ್ ಕೂಡ ಮಾಡಿದ್ದ ಕುಸುಮಾ ನಂತರ ಆ ಆಸ್ತಿಯನ್ನು ಹಿಂಪಡೆದಿದ್ದರು. ನೀಡಿದ್ದ ಆಸ್ತಿ ಹಿಂಪಡೆದ ಸಿಟ್ಟಲ್ಲಿದ್ದ ಸುಧಾ, ಸ್ವಲ್ಪ ಆಸ್ತಿ ಮಾರಿದ್ದ ಹಣವನ್ನು ಕೊಡುವಂತೆ ಕುಸುಮಾಗೆ ಪೀಡಿಸುತ್ತಿದ್ದರು. ಆಗಾಗ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ನಡೆಯುತ್ತಿತ್ತು.
ಕುಸುಮ ವಾಸವಿದ್ದ ಬಂಡಿಮಠದ ಮನೆ ಭದ್ರಾ ನದಿಯ ತೀರದಲ್ಲಿದ್ದು, ಮಳೆಗಾಲದಲ್ಲಿ ಈ ಭಾಗ ಸಂಪೂರ್ಣ ಮುಳುಗಡೆಯಾಗಲಿದೆ. ಹೀಗಾಗಿ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಯೋಜನೆ ಮಾಡಿರುವ ಕಾರಣ, ಮನೆ ತನ್ನ ಹೆಸರಿಗೆ ಬಂದರೆ ಪರಿಹಾರ ಕೂಡ ತನಗೆ ಸಿಗಲಿದೆ ಎಂಬ ಉದ್ದೇಶ ಸುಧಾ ಹೊಂದಿದ್ದಳು.
ನ.10 ರಂದು ಮೈಸೂರಿನಿಂದ ಬಂಡಿಮಠಕ್ಕೆ ಬಂದಿದ್ದ ಸುಧಾ, ರಾತ್ರಿ ಕುಸುಮಾ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಕುಸುಮ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ನಾಟಕವಾಡಿದ್ದು, ಹೃದಯಾಘಾತದಿಂದ ಸಾಕು ತಾಯಿ ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ್ದಳು. ತಾನೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿಸಿದ್ದಳು.
ಇಷ್ಟೆಲ್ಲ ನಡೆದ ಬಳಿಕ ಘಟನೆ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಬಂದಿದೆ. ಕುಸುಮಾ ಮುಖದ ಮೇಲೆ ಆಗಿದ್ದ ಗಾಯ ಕಂಡು ಇದೊಂದು ಅನುಮಾನಾಸ್ಪದ ಸಾವು ಎಂದು ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು, ಸುಧಾಳ ಕಳ್ಳಾಟವನ್ನು ಬಯಲಿಗೆ ಎಳೆದಿದ್ದಾರೆ. ಆಸ್ತಿಗಾಗಿ ಸಾಕು ತಾಯಿಯನ್ನು ಕೊಂದ ಮಗಳನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


