ಬೆಂಗಳೂರು: ನಗರದ ಯಲಹಂಕ ಬಳಿಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳ ನಾಳೆಯಿಂದ ನ. 16 ರವರೆಗೆ ನಾಲ್ಕು ದಿನಗಳ ಕಾಲ “ಸಮೃದ್ಧ ಕೃಷಿ – ವಿಕಸಿತ ಭಾರತ” (ನೆಲ, ಜಲ ಮತ್ತು ಬೆಳೆ)” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳವು ನಡೆಯಲಿದೆ.
ಈ ಮೇಳವು ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಚರ್ಚೆ, ವಸ್ತು ಪ್ರದರ್ಶನ ಮುಂತಾದವುಗಳು ಅಡಕವಾಗಿವೆ. ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರವಾಗಿ ಆಚರಿಸುತ್ತಾ ರೈತರು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಕೃಷಿ ತಾಂತ್ರಿಕತೆಯ ಜ್ಞಾನದ ವಿವಿಧ ಮಜಲುಗಳನ್ನು ಪರಿಚಯ ಮಾಡಿಕೊಡಲು ಉತ್ತಮ ವೇದಿಕೆಯಾನ್ನು ಒದಗಿಸುತ್ತಿದೆ.
ಈ ಕೃಷಿ ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಐದು ವಿವಿಧ ಬೆಳೆಗಳ – ತಳಿಗಳು ಧಾನ್ಯ ಜೋಳದ ತಳಿ ಸಿಎನ್‌ಜಿಎಸ್-1, ಸೂರ್ಯಕಾಂತಿ ಸಂಕರಣ ತಳಿ ಕೆಬಿಎಸ್‌ಹೆಚ್-88, ಹರಳು ಸಂಕರಣ ತಳಿ ಬಿಸಿಹೆಚ್-162, ಕಪ್ಪು ಅರಿಶಿಣ ತಳಿ ಸಿಹೆಚ್‌ಎನ್‌ಬಿಟಿ-1 ಮತ್ತು ಅರಿಶಿಣ ತಳಿ ಐಐಎಸ್‌ಆರ್ ಪ್ರತಿಭಾ ಹಾಗೂ 36 ನೂತನ ತಾಂತ್ರಿಕತೆಗಳನ್ನು ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು.
ಕೀಟ ಪ್ರಪಂಚ:
ಕೀಟವಿಸ್ಮಯ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮಕ್ಕಳಿಗೆ ಮತ್ತು ಕೃಷಿ ಆಸಕ್ತರಿಗೆ ಆಕಷಣೆಯಾಗಲಿದೆ. ಕೃಷಿಕರಿಗೆ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವೈವಿಧ್ಯಮಯ ಕೀಟ ಪ್ರಪಂಚದ ಪರಿಚಯ, ಆಕರ್ಷಕ ಕೀಟಗಳ ಸಜೀವ ಪ್ರದರ್ಶನ, ಕೀಟಗಳ ಮಾದರಿಗಳ ಪ್ರದರ್ಶನ, ಕೀಟಗಳ ಜೀವನ ಚಕ್ರ, ವಂಶಾಭಿವೃದ್ಧಿ, ವಾಸಸ್ಥಾನ, ಸಾಮಾಜಿಕ ನಡವಳಿಕೆ, ಉಪಯುಕ್ತ ಮತ್ತು ಫಲಪ್ರದ ಕೀಟಗಳ ಪರಿಚಯ, ಇನ್ಸೆಕ್ಟ್ಸ ಕೆಫೆ (ಆಹಾರವಾಗಿ ಕೀಟ), ಕೃಷಿ ಬೆಳೆಗಳನ್ನು ಬಾಧಿಸುತ್ತಿರುವ ಹಾನಿಕಾರಿಕ ಕೀಟಗಳು, ಹಾನಿಯ ಲಕ್ಷಣ ಹಾಗೂ ನಿರ್ವಹಣಾ ತಾಂತ್ರಿಕತೆಗಳ ಪ್ರದರ್ಶನ, ಕೀಟ ಆಧಾರಿತ ರೋಗ ಚಿಕಿತ್ಸೆ, ವಿಧಿ ವಿಜ್ಞಾನದಲ್ಲಿ ಕೀಟ ಶಾಸ್ತ್ರದ ಬಳಕೆ ಮೊದಲಾದ ವಿಷಯಗಳ ಬಗ್ಗೆ ಪರಿಚಯಿಸಲಾಗುವುದು.
ಈ ಪ್ರದರ್ಶನದಲ್ಲಿ ಕೀಟಗಳ ಬಗ್ಗೆ ಇದುವರೆಗೂ ತಿಳಿದಿರುವ, ಎಷ್ಟೋ ತಿಳಿಯದಿರುವ ವೈಜ್ಞಾನಿಕ ಸಂಗತಿಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಇಲ್ಲಿ ತಿಳಿಸಲಾಗುತ್ತದೆ. ಜೀವವೈವಿಧ್ಯತೆಗೆ ಹೆಸರಾದ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಹಾಗೂ ಬೇರೆ ದೇಶಗಳಲ್ಲಿ ಕಂಡುಬರುವ ಜೀವಂತ ಹಾಗೂ ಸಂರಕ್ಷಿಸಿರುವ ಸಾವಿರಾರು ಕೀಟಗಳನ್ನು ಪ್ರದರ್ಶಿಸಲಾಗುತ್ತದೆ.
ಚಿತ್ತಾಕರ್ಷಕ ಚಿಟ್ಟೆಗಳು:
ಸೃಷ್ಟಿಯಲ್ಲಿ ಕೀಟಗಳ ಉಗಮ, ಕೀಟಗಳಲ್ಲಿರುವ ವೈವಿಧ್ಯತೆ, ಕೀಟಗಳಲ್ಲಿರುವ ವೈಶಿಷ್ಟ್ಯತೆ, ಕೀಟಗಳ ವಿಭಿನ್ನವಾದ ಹಾಗೂ ವಿಸ್ಮಯಕಾರಿ ಜೀವನ ಚರಿತ್ರೆಯನ್ನು ತಿಳಿಸಲಾಗುತ್ತದೆ. ಕೃಷಿ ಪ್ರಾಧಾನ್ಯವಾದ ನಮ್ಮ ದೇಶದಲ್ಲಿ ಕಂಡುಬರುವ ವಿವಿಧ ಬಗೆಯ ಪರಾಗಸ್ಪರ್ಶ ಕೀಟಗಳು ಹಾಗೂ ಬೆಳೆಗಳನ್ನು ನಾಶ ಮಾಡುವ ಕೀಟಪೀಡೆಗಳು, ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ರೋಗಗಳನ್ನು ಹರಡುವ ಕೀಟಗಳು, ಮರಣ ಹೊಂದಿದ ಸಮಯವನ್ನು ನಿಖರವಾಗಿ ತಿಳಿಸಿ ಪತ್ತೇದಾರಿ ಕೆಲಸವನ್ನು ಸುಲಭವಾಗಿಸುವ ಕೀಟಗಳು, ಸಂಘಜೀವನ ನಡೆಸುವ ಕೀಟಗಳು, ಚಿತ್ತಾಕರ್ಷಕ ಚಿಟ್ಟೆಗಳು, ಬಹುರೂಪಿ ದುಂಬಿಗಳು, ಬೆಡಗು – ಬಿನ್ನಾಣಗಳಿಂದ ಬೆರಗುಗೊಳಿಸುವ ಜೀರುಂಡೆಗಳು, ಸೂಜಿ ಮೊನೆಯಷ್ಟು ಕಿರಿದಾದ ಹಾಗೂ ಅಂಗೈಯಷ್ಟಗಲದ ದೈತ್ಯ ಕೀಟಗಳೊಂದಿಗೆ ಅಪರೂಪದ ಕೀಟ ಸಂಕುಲವನ್ನೇ ಈ ಪ್ರದರ್ಶನದಲ್ಲಿ ಕಾಣಬಹುದು. ಇದಲ್ಲದೆ ಕೀಟಗಳನ್ನು ಸ್ವಾದಿಷ್ಟ ಆಹಾರವನ್ನಾಗಿಸುವ ಬಗೆ ಅಚ್ಚರಿಗೊಳಿಸುತ್ತದೆ.
ಕೀಟಗಳಿಂದ ಆಭರಣ:
ಇವುಗಳ ಜೊತೆಗೆ, ಕೀಟಗಳಿಂದ ಸಿದ್ದಪಡಿಸಿರುವ ಆಭರಣಗಳು, ಕೀಟದಿಂದ ತಯಾರಿಸಬಹುದಾದ ತಿನಿಸು ಪದಾರ್ಥಗಳು, ವಿವಿಧ ದೇಶಗಳು ಕೀಟಗಳ ಗೌರವಾರ್ಥವಾಗಿ ಹೊರ ತಂದಿರುವ ಅಂಚೆ ಚೀಟಿಗಳ ಬೃಹತ್ ಸಂಗ್ರಹವನ್ನೂ ನೋಡಬಹುದು. ಕ್ಯಾಮೆರಾದ ಕಣ್ಣಿನಲ್ಲಿ ಕಂಡ ಕೀಟಗಳ ಲೋಕ, ವಿವಿಧ ಬಗೆಯ ಕೀಟಗಳ ಜೀವನ ಶೈಲಿಯ ಮಾದರಿಗಳು, ಗಾಜಿನ ಮೇಲೆ ಮೂಡಿರುವ ಕೀಟಗಳ ಅಪರೂಪದ ಚಿತ್ರಗಳು ನೋಡುಗರ ಮನಸ್ಸನ್ನು ಸೂರೆಗೊಳಿಸುತ್ತದೆ.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ವಿಶ್ವವಿದ್ಯಾನಿಲಯದ ಕೀಟಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸಿ ಹೆಚ್ಚಿನ ಮಾಹಿತಿಪಡೆದುಕೊಳ್ಳಬಹುದು. ಒಂದೇ ಸೂರಿನಡಿ ಕೀಟಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಈ ಪ್ರದರ್ಶನವು ಎಲ್ಲಾ ವೀಕ್ಷಕರಿಗೆ ನಿಸರ್ಗದ ನಿಯಮಗಳನ್ನು ತಿಳಿಸಿಕೊಡುತ್ತದೆ. ಪ್ರಕೃತಿಯಲ್ಲಿ ಕೀಟಗಳ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಹೊಣೆ ನಮ್ಮೆಲ್ಲರಿಗೂ ಸೇರಿದ್ದು ಎನ್ನುವ ಅರಿವನ್ನು ಮೂಡಿಸುತ್ತದೆ.
ಮತ್ಸ್ಯ ಲೋಕ:
ಭಾರತೀಯ, ಸ್ಥಳೀಯ ಅಲಂಕಾರಿಕ ಮೀನು, ಭಾರತೀಯ ಗೆಂಡೆ ಮೀನು, ದೇಸಿ – ಪಾರಂಪರಿಕ ಮೀನು ಮರಿಗಳು, ಕರ್ನಾಟಕ
ನಾಡ ಮೀನು, ಸಿಹಿ ನೀರು ಮುತ್ತಿನ ಕೃಷಿ ಹಾಗೂ ಸುಧಾರಿತ ಮೀನು ತಳಿಗಳ ಪ್ರದರ್ಶನ ಮತ್ತು ಮಾರಾಟ ಒಳಗೊಂಡಿರುತ್ತದೆ.
ಜಾನುವಾರು ಪ್ರದರ್ಶನ:
ಕೃಷಿಮೇಳದ ಮತ್ತೊಂದು ಆಕರ್ಷಣೆ ಜಾನುವಾರುಗಳು. ಗಿರ್, ಸಾಹಿವಾಲ್, ರೆಡ್‌ಸಿಂಧಿ, ಜವಾಹರಿ, ಮಲನಾಡು ಗಿಡ್ಡ, ನಾರಿ, ಡಾಂಗಿ, ಡಿಯೋನಿ, ಹಳ್ಳ್ಳಿಕಾರ್, ವೇಚೂರು, ಪುಂಗನೂರು ಇನ್ನೂ ಮುಂತಾದ ವೈವಿದ್ಯಮಯ ಜಾನುವಾರುಗಳು ಪ್ರದರ್ಶಿಸಲಾಗುವುದು. ದೇಶಿ ಹಸುಗಳು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರ ಸಮತೋಲನದ ಅವಿಭಾಜ್ಯ ಅಂಗ. ಅವುಗಳ ಉತ್ಪನ್ನಗಳು ನೀಡುವ ನೈಸರ್ಗಿಕ ಪರಿಹಾರಗಳು ಹೆಚ್ಚು. ಇವುಗಳಿಂದ ಕೃಷಿಗೆ ಸಾವಯವ ಗೊಬ್ಬರದ ಪೂರೈಕೆಯಾಗಿ ರಾಸಾಯನಿಕ ಗೊಬ್ಬರದ ಅವಲಂಬನೆ ಕಡಿಮೆ ಮಾಡುತ್ತವೆ. ಇದರಿಂದ ಪರಿಸರಕ್ಕೆ ಮಣ್ಣಿನ ಫಲವತ್ತತೆ ಮತ್ತು ಹಸಿರು ಮನೆ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಮೇಳದ ಉದ್ದೇಶ:
ಈ ವರ್ಷದ ಮುಖ್ಯ ಆಕಷಣೆ ಕೃಷಿ ಪ್ರವಾಸೋದ್ಯಮ. ಗ್ರಾಮೀಣ ಪ್ರದೇಶಗಳಲ್ಲಿರುವ ಪಾರಂಪರಿಕ ಕೃಷಿ ಪದ್ಧತಿಗಳು, ದೈನಂದಿನ ಕೃಷಿ ಚಟುವಟಿಕೆಗಳನ್ನು, ಗ್ರಾಮೀಣ ಕಲೆ ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ – ತೊಡುಗೆ ಮುಂತಾದವುಗಳನ್ನು ನಗರವಾಸಿಗಳಿಗೆ ಪರಿಚಯಿಸಲು ಪ್ರವಾಸಿಗರನ್ನು ಕೃಷಿ ಭೂಮಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗೆಗಳನ್ನು ತೋರಿಸುವುದು ಮತ್ತು ಭಾಗವಹಿಸಲು ಅವಕಾಶ ನೀಡುವುದು, ಆಸಕ್ತರಿಗೆ ಪರಿಚಯಿಸುವ ಮೂಲಕ ಆದಾಯವನ್ನು ಕಂಡುಕೊಳ್ಳುವ ಉದ್ದೇಶ ಕೃಷಿ ಪ್ರವಾಸೋದ್ಯಮದ್ದಾಗಿದೆ.
ಕೊಂಬಿನ ಅಲಂಕಾರ:
ಈ ಕೃಷಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಈ ತಾಕಿ ಅಂಚುಗಳಲ್ಲಿ ಕಾವಲು ಗೋಪುರಗಳ ನಿರ್ಮಾಣ, ಸಾಂಪ್ರದಾಯಿಕ ತೂಗುಯ್ಯಾಲೆಗಳು, ಅಲ್ಲಲ್ಲಿ ದೃಷ್ಠಿ ಗೊಂಬೆಗಳನ್ನು ಸೃಷ್ಠಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ದೇಸಿ ಜಾನುವಾರುಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ಇವುಗಳನ್ನು ಪಾರಂಪರಿಕ ಕೊರಳು ಘಂಟೆಗಳು, ಕೊಂಬಿನ ಅಲಂಕಾರ ಇತ್ಯಾದಿಗಳಿಂದ ಸಿಂಗರಿಸಿ ನೋಡುಗರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.


