ಡಿಸಿಎಂ ಡಿಕೆಶಿವಕುಮಾರ್ ಸಾರ್ ಯಾಕಿಷ್ಟು ದುಬಾರಿ ಡಿಪಿಆರ್, 2.2 ಕಿ.ಮೀ. ಟನಲ್ ರಸ್ತೆಗೆ ₹1,385 ಕೋಟಿ ಡಿಪಿಆರ್ ಸಿದ್ದಪಡಿಸಲಾಗಿದೆ. ತಾವು ಮಾಡಿಸುವ ಡಿಪಿಆರ್ ಗಳು ಚಿನ್ನದ ಕಾಗದದ ಮೇಲೆ ಬರೆಯಲಾಗುತ್ತೋ ಅಥವಾ ಚಿನ್ನದ ಶಾಹಿಯಿಂದ ಮುದ್ರಣ ಆಗುತ್ತೋ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ ಕುಟುಕಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಡಿಸಿಎಂ @DKShivakumar ಅವರೇ, ಇನ್ನೆಷ್ಟು ಲೂಟಿ ಹೊಡೆಯುತ್ತೀರಿ ಸ್ವಾಮಿ, ಕನ್ನಡಿಗರನ್ನು ಲೂಟಿ ಹೊಡೆಯಲು ಇನ್ನೆಷ್ಟು ಹಗಲು ದರೋಡೆ ಯೋಜನೆಗಳನ್ನು ರೂಪಿಸುತ್ತೀರಿ, ಟನಲ್ ರೋಡು ಬೇಡ ಯಾವುದೂ ಬೇಡ. ಮೊದಲು ಇರುವ ರಸ್ತೆಗಳನ್ನು ರಿಪೇರಿ ಮಾಡಿಸಿ, ಸರಿಯಾಗಿ ನಿರ್ಹವಣೆ ಮಾಡಿ. ಮೆಟ್ರೋ ಕಾಮಗಾರಿ ಚುರುಕುಗೊಳಿಸಿ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಸುರಂಗ ರಸ್ತೆ ನಿರ್ಮಾಣ ಮಾಡಲು ಸಿದ್ಧತೆ ಮಾಡಿದ ಸಮಗ್ರ ಯೋಜನಾ ವರದಿಯಲ್ಲಿ ಲೋಪದೋಷಗಳಿರುವುದಾಗಿ ತಜ್ಞರ ಸಮಿತಿ ಈಗಾಗಲೇ ವರದಿ ನೀಡಿದೆ. ಸಂಚಾರ ದಟ್ಟಣೆ ತಡೆಗಟ್ಟಲು 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ 19 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಮಾಡಲಾಗಿದೆ.
ಈ ಟನಲ್ ರಸ್ತೆ ವಿವಾದ ಕಾವೇರುತ್ತಿದ್ದಂತೆಯೇ ನಗರಾಭಿವೃದ್ಧಿ ಇಲಾಖೆ ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದನಗೌಡ ಹೆಗರಡ್ಡಿ ನೇತೃತ್ವದಲ್ಲಿ ಐವರ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಪಿಆರ್ ಅಧ್ಯಯನ ಮಾಡಿ ಹಲವು ದೋಷಗಳನ್ನು ಗುರುತಿಸಿದೆ.
ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಲಾಗಿದೆ. 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಹೆಬ್ಬಾಳ ನಾಲಾ ಡೈವರ್ಷನ್ ಸರಿಯಿಲ್ಲ. ಬೃಹತ್ ಯೋಜನೆಗೆ 25 ವರ್ಷ ಬೇಕಾಗ ಬಹುದು. ಪಾದಚಾರಿ ಮಾರ್ಗ, ನೀರಿನ ಒಳಚರಂಡಿ ಸೇರಿದಂತೆ ಹೈಡ್ರಾಲಿಕ್ ವಿನ್ಯಾಸ, ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ ಇಲ್ಲ ಎಂದು ಹೇಳಿದೆ.


