ಬೆಂಗಳೂರಿನಲ್ಲಿ 12 ವಸತಿ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಲೀಕರಿಗೆ ಹಲವು ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರು ಸಬ್-ರಿಜಿಸ್ಟ್ರಾರ್ ರೂಪಾ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ ಮಾಲೀಕ ನವೀನ್ ಕುಮಾರ್‌ನನ್ನು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ (40) ಮತ್ತು ಚಂದಾಪುರ ನಿವಾಸಿಯಾದ ನವಯುಗ ಪ್ರಾಪರ್ಟೀಸ್ ಕಂಪನಿಯ ಏಜೆಂಟ್ ನವೀನ್ ಕುಮಾರ್ ಈ ವಂಚನೆ ಕೃತ್ಯದ ರೂವಾರಿಗಳು.
ಪರಪ್ಪನ ಅಗ್ರಹಾರ ನಿವಾಸಿ ದೂರುದಾರರನ್ನು ಸಬ್-ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು, ಅವರ ಸಮ್ಮುಖದಲ್ಲಿ ಒಂದು ನಿವೇಶನವನ್ನು ರಿಜಿಸ್ಟರ್ ಮಾಡಿಸುವ ನೆಪದಲ್ಲಿ 12 ನಿವೇಶನಗಳಿಗೆ ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ, ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ತಮಗೆ ಗೊತ್ತಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಬಹು ನಿವೇಶನಗಳನ್ನು ಮಾರಾಟ ಮಾಡಿ ವಂಚಿಸಲಾಗಿದೆ ಎಂದು ದೂರುದಾರ ವ್ಯಕ್ತಿಗೆ ತಿಳಿದು ಬಂದಿದೆ. ಆಗಸ್ಟ್ 2022 ರಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ನಂತರ ಜನವರಿ 2024 ರಲ್ಲಿ ಸಿಸಿಬಿಯ ಸಂಘಟಿತ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿತ್ತು. ನವೆಂಬರ್ ಎರಡನೇ ವಾರದಲ್ಲಿ ಸಿಸಿಬಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದೆ.


