ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಿ ಗ್ರಾಮದ ಚಾಂದ್ ಪಾಶಾ ಎಂಬಾತನ ಮೂವರು ಮಕ್ಕಳ ಮೇಲೆ ಆತನ ತಮ್ಮ ಖಾಸೀಂ ಬೆಂಗಳೂರಿನ ಕಮ್ಮಸಂದ್ರದಲ್ಲಿ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ಮಹ್ಮದ್ ಇಸಾಕ್ (9) ಮತ್ತು ಖಾಸೀಂ ಅಲಿ (7) ಕೊಲೆಯಾಗಿರುವ ಮಕ್ಕಳು. ಐದು ವರ್ಷದ ಮೊಹಮ್ಮದ್ ರೋಹನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಂದ್ ಪಾಶಾ ಕುಟುಂಬವು ಕಮ್ಮಸಂದ್ರದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಚಾಂದ್ ಪಾಶಾ ಕಾಂಟ್ರಾಕ್ಟ್ ಕಾರ್ಮಿಕನಾಗಿದ್ದು, ಪತ್ನಿ ರಿಹಾನಾ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಖಾಸೀಂ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಣ್ಣನ ಮನೆಯಲ್ಲಿ ವಾಸವಾಗಿದ್ದ.
ಚಾಂದ್ ಪಾಶಾ ಕೆಲಸಕ್ಕೆ ತೆರಳಿದ್ದಾಗ ಮತ್ತು ರಿಹಾನಾ ಬ್ಯಾಂಕಿಗೆ ಹೋಗಿದ್ದಾಗ ಮಕ್ಕಳ ಜವಾಬ್ದಾರಿಯನ್ನು ಅಜ್ಜಿಯ ಮೇಲೆ ಬಿಟ್ಟಿದ್ದರು. ಅಜ್ಜಿ ಕಿರಾಣಿ ಅಂಗಡಿಗೆ ತೆರಳಿದ ಸಂದರ್ಭದಲ್ಲಿ ಖಾಸೀಂ ಮನೆಯನ್ನು ಒಳಗಿನಿಂದ ಲಾಕ್ ಮಾಡಿ ಕಲ್ಲು ಒಡೆಯುವ ಸುತ್ತಿಗೆ ಮತ್ತು ಚಾನಾದಿಂದ ಮಕ್ಕಳ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯಿಂದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಜ್ಜಿ ಮನೆಗೆ ಮರಳಿದಾಗ ಖಾಸೀಂ ಒಳಗಿದ್ದು ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ದಾರುಣ ದೃಶ್ಯ ಕಂಡುಬಂದಿದೆ. ಖಾಸೀಂ ಘಟನಾ ಸ್ಥಳದಿಂದ ಪರಾರಿಯಾಗಿದ್ದರೂ ಪೊಲೀಸರು ಬಂಧಿಸಿದ್ದಾರೆ.
ಖಾಸೀಂ ಅಣ್ಣನೊಂದಿಗೆ ಆಗಾಗ ಜಗಳವಾಡುತ್ತಿದ್ದ. ಕೊಲೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆರೋಪಿಯ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಭಾನೋಟ್ ತಿಳಿಸಿದ್ದಾರೆ. ಇಡೀ ಕುರಕುಂದಿ ಗ್ರಾಮವೇ ಶೋಕದಲ್ಲಿದ್ದು, ಹಿಂದೂ, ಮುಸ್ಲಿಂ ಎನ್ನದೆ ಗ್ರಾಮಸ್ಥರು ಆರೋಪಿ ಖಾಸೀಂಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.