ಕಾರಾಗೃಹ ಇಲಾಖೆಯನ್ನು ಸರಿ ಮಾಡೋದು ನಾಯಿ ಬಾಲಕ್ಕೆ ದಬ್ಬೆ ಕಟ್ಟಿದಂತೆ, ಕಾರಾಗೃಹ ಇಲಾಖೆ ಸಿಬ್ಬಂದಿ ಯಾರ ಮಾತನ್ನು ಕೇಳೋದಿಲ್ಲ, ದಯವಿಟ್ಟು ಕಾರಾಗೃಹ ಇಲಾಖೆಯಿಂದ ರಿಲೀವ್ ಮಾಡಿ ಎಂದು ADGP ದಯಾನಂದ್ DGP ಸಲೀಂ ಹಾಗು ಗೃಹ ಸಚಿವ ಪರಮೇಶ್ವರ್ ಗೆ ಮನವಿ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ADGP ದಯಾನಂದ್ ಅವರು ಗೃಹ ಸಚಿವರಿಗೆ ಹಾಗು DGP ಗೆ ಮಾಹಿತಿ ನೀಡಿ ರಜೆ ಮೇಲೆ ತೆರಳಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಕಾರಾಗೃಹ ಇಲಾಖೆ ಎಣ್ಣೆ ಸೀಗೆಕಾಯಿ ಇದ್ದಂತೆ, ಹಾಗಾಗಿ ನನಗೆ ಅದನ್ನು ಸರಿ ಮಾಡಲು ಆಗೋಲ್ಲ, ಕಾರಾಗೃಹ ಇಲಾಖೆಯಿಂದ ರಿಲೀವ್ ಮಾಡಿ ಬೇರೆ ಜವಾಬ್ದಾರಿ ಕೂಡಿ ಎಂದು ದಯಾನಂದ್ ಕೇಳಿಕೊಂಡಿದ್ದಾರೆ.
ದಯಾನಂದ ADGP ಯಾಗಿ ವರ್ಗಾವಣೆಯಾದ ನಂತರ ಮೂರನೇ ಬಾರಿ ಪರಪ್ಪನ ಅಗ್ರಹಾರ ಜೈಲು ವೀಡಿಯೊಗಳು ವೈರಲ್ ಆಗಿವೆ. ಪರಪ್ಪನ ಅಗ್ರಹಾರ ಜೈಲಿಗೆ IPS ಅಧಿಕಾರಿಯನ್ನು ಚೀಫ್ ಸುಪರಿಂಡೆಂಟ್ ಆಗಿ ನೇಮಕ ಮಾಡಲು ಸರ್ಕಾರ ಮುಂದಾಗಿದೆ.
ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಐಸಿಸ್ ಉಗ್ರ ಸೇರಿದಂತೆ ಅಪರಾಧಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾಧಿಕಾರಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜೈಲಿನಲ್ಲಿ ಕ್ರಿಮಿನಲ್ ಗಳಿಗೆ ಜೈಲಿನಲ್ಲಿ ಮೊಬೈಲ್, ಟೀವಿ ಸೇರಿದಂತೆ ಹಲವು ಸೌಲಭ್ಯ ನೀಡುವ ಮೂಲಕ ರಾಜಾತಿಥ್ಯ ನೀಡುತ್ತಿರುವ ವೀಡಿಯೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಂಡರು.
ಜೈಲಿನಲ್ಲಿ ಕ್ರಿಮಿನಲ್ ಗಳಿಗೆ ರಾಜಾತಿಥ್ಯ ನೀಡಿರುವ ವೀಡಿಯೊಗಳ ಪರಿಶೀಲನೆ ಹಾಗೂ ಜೈಲಿನ ವ್ಯವಸ್ಥೆಗಳ ತನಿಖೆಗೆ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆರ್. ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ಸಿಂಗ್ ಒಳಗೊಂಡ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಾಗಿದ್ದು, ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಗೃಹ ಸಚಿವರು ಸೂಚಿಸಿದ್ದಾರೆ.
ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಮ್ಯಾಗೇರಿ ಮತ್ತು ಅಶೋಕ್ ಅವರನ್ನು ಅಮಾನತು ಮಾಡಲಾಗಿದೆ. ಸದ್ಯಕ್ಕೆ ಐಪಿಎಸ್ ಅಧಿಕಾರಿ ಜೈಲಿನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.


