ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮೇಲ್ಪಾಲ್ ಸಮೀಪದ ಗಂಗೋಜಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಬಾಲಕನೊಬ್ಬ ಅಲ್ಲಿ ಮದ್ಯಪಾನ ಮಾಡಿಕೊಂಡು ಬಂದಿದ್ದು, ಈ ವಿಚಾರ ಪೋಷಕರಿಗೆ ತಿಳಿಯುತ್ತದೆ ಎಂಬ ಭಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಪ್ರವಚನ್ (13) ಆತ್ಮಹತ್ಯೆ ಮಾಡಿಕೊಂಡವ. ಊರಿನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಆತ, ತನ್ನ ಸ್ನೇಹಿತರೊಂದಿಗೆ ಸೇರಿ ಮದ್ಯಪಾನ ಮಾಡಿದ್ದಾನೆ. ಬಳಿಕ ಮನೆಗೆ ವಾಪಾಸ್ ಬಂದಿದ್ದು, ಈ ವೇಳೆ ತಾನು ಮದ್ಯಪಾನ ಮಾಡಿದ್ದು ಪೋಷಕರಿಗೆ ತಿಳಿಯುತ್ತದೆ ಎಂಬ ಭಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರೀತಿ ಹೆಸರಲ್ಲಿ ಕಿರುಕುಳಕ್ಕೆ ನೊಂದ ಯುವತಿ ಸುಸೈಡ್
ಹಾಸನದ ಜಾಗರವಳ್ಳಿ ಗ್ರಾಮದ ಯುವತಿ ಪ್ರೀತಿಯ ಹೆಸರಿನಲ್ಲಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಾಗರವಳ್ಳಿ ಗ್ರಾಮದ ಜಯರಾಮ ನಾಯಕ್ ಹಾಗೂ ಶೋಭಾ ದಂಪತಿ ಪುತ್ರಿ ಪ್ರಿಯಾಂಕ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಆಲೂರು ತಾಲೂಕಿನ ಕಲ್ಕೆರೆ ಪೇಟೆಯ ಸುಮಂತ್ (20) ಎಂಬ ಯುವಕ ಆರೋಪಿಯಾಗಿದ್ದು, ಕೆಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆದಿದ್ದು, ಇಬ್ಬರೂ ಕೆಲಸ ನಿಮಿತ್ತ ಬೆಂಗಳೂರಿನ ನೆಲಗದರಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಇತ್ತೀಚೆಗೆ ಸುಮಂತ್ ಪ್ರೇಯಸಿಯ ಮೇಲೆ ಅನುಮಾನಪಡುತ್ತಿದ್ದ, ಜಗಳವಾಡುತ್ತಿದ್ದ. ಬೆದರಿಕೆ ಹಾಕುತ್ತಿದ್ದ ಎಂದು ಆಕೆಯ ತಾಯಿ ಶೋಭಾ ತಿಳಿಸಿದ್ದಾರೆ. ನೀನು ಬದುಕಬಾರದು, ಸಾಯಬೇಕು ಎಂದು ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ. ನೊಂದ ಪ್ರಿಯಾಂಕ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


