ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ರಾಜ್ಯದೆಲ್ಲೆಡೆ ಆಗಸ್ಟ್ 3ರವರೆಗೆ ಭಾರಿ ಮಳೆಯಾಗಲಿದೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ವಿಜಯಪುರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ,ಗದಗ, ಧಾರವಾಡ, ಬೀದರ್, ಬೆಳಗಾವಿಯಲ್ಲಿ ಮಳೆಯಾಗಲಿದೆ.
ಕೊಡಗಿನಲ್ಲಿ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ಭೂಮಿ ಕುಸಿಯುತ್ತಿದೆ. ಮೇಕೇರಿ ಗ್ರಾಮದ ಶಕ್ತಿನಗರದಲ್ಲಿ ಭೂ ಕುಸಿತದ ಹಿನ್ನಲೆ ಬೆಟ್ಟದ ಮೇಲಿರುವ 60ಕ್ಕೂ ಹೆಚ್ಚು ಕುಟುಂಬಗಳು ಮನೆ ತೊರೆದಿವೆ. ಗಾಳಿಗೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಎನ್ಡಿಆರ್ಎಫ್ ಮತ್ತು ಕೊಡಗು ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ. ಬಜೆಗುಂಡಿ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದಿದೆ.
ಹಾರಂಗಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದ್ದು, ಅಪಾಯದ ಮಟ್ಟ ಮೀರಿ ಹಾರಂಗಿ ಮತ್ತು ಕಾವೇರಿ ನದಿ ಹರಿಯುತ್ತಿವೆ. ಕುಶಾಲನಗರ ತಾಲೂಕಿನ ಹುದುಗೂರು ವ್ಯಾಪ್ತಿಯಲ್ಲಿ ತೋಟ ಮತ್ತು ಗದ್ದೆಗಳಿಗೆ ನೀರು ನುಗ್ಗಿದೆ. ಪೊನ್ನಂಪೇಟೆಯ ಹಲವೆಡೆ ತಗ್ಗು ಪ್ರದೇಶ ಜಲಾವೃತವಾಗಿದೆ. ಮಡಿಕೇರಿ-ಸೋಮವಾರಪೇಟೆ ರಸ್ತೆ ಮೇಲೆ ಬೃಹತ್ ಮರ ಉರುಳಿದ್ದು, ಸಂಚಾರ ಸ್ಥಗಿತವಾಗಿತ್ತು. ತೀವ್ರ ಮಳೆ ಬಿರುಗಾಳಿಗೆ ಜನಜೀವನ ಹೈರಾಣಾಗಿದೆ.