ಚಿನ್ನ ಮಾರಾಟ ಮಾಡಿ ಹಣ ಕೊಡುವುದಾಗಿ ನಂಬಿಸಿ 1.6 ಕೋಟಿ ರೂ. ಮೌಲ್ಯದ 1,300 ಗ್ರಾಂ ಚಿನ್ನವನ್ನು ವಂಚಿಸಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜೀರನ್ ಸಕಾರಿಯಾ, ರಾಜೇಂದ್ರ ಸಕಾರಿಯಾ ಬಂಧಿತರು. ಕೆಲವು ತಿಂಗಳ ಹಿಂದೆ ಹರ್ಷಿತ್.ಬಿ ಎಂಬವರಿಗೆ ಆರೋಪಿಗಳು ಪರಿಚಯವಾಗಿದ್ದರು. ಬಳಿಕ ಮಹಿಳೆಯಿಂದ 1.60 ಕೋಟಿ ಮೌಲ್ಯದ 1300 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದು ಮಾರಾಟ ಮಾಡಿ ಹಣ ಕೊಡುವುದಾಗಿ ಹೇಳಿದ್ದರು.
ಚಿನ್ನ ಪಡೆದು ಮೂರು ತಿಂಗಳಾದರೂ ಹಣ ನೀಡಿರಲಿಲ್ಲ. ಹೀಗಾಗಿ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಡೇಟಿಂಗ್ ಆ್ಯಪ್: ಚಿನ್ನಾಭರಣ ಕಳೆದುಕೊಂಡ ಉದ್ಯಮಿ
ಎರಡು ತಿಂಗಳ ಹಿಂದೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಮಹಿಳೆ 26 ವರ್ಷದ ಖಾಸಗಿ ಕಂಪನಿ ಉದ್ಯೋಗಿಯ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾಳೆ. ಆರೋಪಿಯನ್ನು ಕವಿಪ್ರಿಯಾ ಎಂದು ಗುರುತಿಸಲಾಗಿದೆ. ನಾಗಸಂದ್ರದ ಎಚ್ಎಂಟಿ ಲೇಔಟ್ನಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿರುವ ಸಂತ್ರಸ್ತ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.
ಡೇಟಿಂಗ್ ಆ್ಯಪ್ನಲ್ಲಿ ಕವಿಪ್ರಿಯಾ ಅವರನ್ನು ಭೇಟಿಯಾಗಿ ನಂತರ ಅಕ್ಟೋಬರ್ 31 ರಂದು ಇಂದಿರಾನಗರದಲ್ಲಿ ಭೇಟಿಯಾಗಿದ್ದರು. ಸಂಜೆ 12 ನೇ ಮುಖ್ಯ ರಸ್ತೆಯಲ್ಲಿರುವ ಕಾಕ್ಟೈಲ್ ಬಾರ್ಗೆ ಇಬ್ಬರೂ ಹೋಗಿದ್ದರು.
ರಾತ್ರಿ ತಡವಾಗಿದ್ದರಿಂದ ವಸತಿಗೃಹಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದ ಕವಿಪ್ರಿಯಾ ದೀಪಕ್ ನನ್ನು ಹತ್ತಿರದ ಹೋಟೆಲ್ಗೆ ಕರೆದೊಯ್ದು ರೂಮ್ ಬುಕ್ ಮಾಡಿದ್ದಳು. ರಾತ್ರಿ ಊಟ ಮಾಡಿದ.ನಂತರ ಆಕೆ ಅವನಿಗೆ ಮತ್ತು ಬರುವ ಔಷಧಿ ನೀಡಿ ನೀರು ಕೊಟ್ಟಿದ್ದಾಳೆ. ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬೆಳಿಗ್ಗೆ ಎದ್ದಾಗ ಅವನ ಚಿನ್ನದ ಸರ, ಚಿನ್ನದ ಕಡ, ಹೆಡ್ಸೆಟ್ ಮತ್ತು 10,000 ರೂ. ಕಾಣೆಯಾಗಿರುವುದು ತಿಳಿದಿದೆ. ಆರೋಪಿಯ ವಿರುದ್ಧ ಕಳ್ಳತನ ಮತ್ತು ವಂಚನೆ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.


