ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಎಸ್. ಬಂಗೀಪುರದ ಬಿಎಸ್ ಶಾಲೆಯ ಶೌಚಾಲಯದಲ್ಲಿ ಪಟಾಕಿ ಸ್ಫೋಟಗೊಂಡಿದ್ದು, ಬಾಂಬ್ ಎಂದು ತಿಳಿದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆಯೊಂದು ನಡೆದಿದೆ.
ಈ ಘಟನೆಯಿಂದ ಕೆಲ ಕಾಲ ಶಾಲೆಯ ಆವರಣದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಬೆಳಗ್ಗೆ 10.30ಕ್ಕೆ ಘಟನೆ ನಡೆದಿದೆ. ಶಾಲೆಯ ಕೆಲವು ವಿದ್ಯಾರ್ಥಿಗಳು ಶೌಚಾಲಯದೊಳಗೆ ಪಟಾಕಿ ಇಟ್ಟು ಸ್ಫೋಟಿಸಿದ್ದಾರೆ. ಸ್ಫೋಟವಾಗುತ್ತಿದ್ದಂತೆ ಶಾಲೆಯ ಇತರ ವಿದ್ಯಾರ್ಥಿಗಳು ಭಯದಿಂದ ಕೂಗಾಡಿದ್ದಾರೆ. ಶಾಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಬಾಂಬ್ ಅಲ್ಲ ಪಟಾಕಿ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯೊಬ್ಬರ ಪೋಷಕ ಆನಂದ್ ರೆಡ್ಡಿ ಎಂಬವರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಶಾಲೆಯಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿ ಬಂದಿದೆ. ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ, ಬಂದು ಪರಿಶೀಲಿಸಿ ಎಂದು ಹೇಳಿದ್ದಾರೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶೌಚಾಲಯದಲ್ಲಿ ಸ್ಫೋಟಗೊಂಡಿದ್ದು ಪಟಾಕಿ ಎಂದು ಖಚಿತಪಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿಯನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.


