Tuesday, November 11, 2025
Menu

ಧರ್ಮ ಒಡೆದು ದುರ್ಬಲಗೊಳಿಸುವ ಪ್ರಯತ್ನ: ಬಸವರಾಜ ಬೊಮ್ಮಾಯಿ

badavaraj bommai

ಹಾವೇರಿ (ರಾಣೆಬೆನ್ನೂರು) ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಇರುವುದು ಭಾರತದಲ್ಲಿ ಈ ಸಂಸ್ಕಾರ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಲೇ ಇದೆ. ಇಲ್ಲಿರುವ ಸನಾತನ ಹಿಂದೂ ವಿಚಾರ ಜೀವಂತ ಇದ್ದರೆ ಒಂದಿಲ್ಲೊಂದು ದಿನ ಜಗತ್ತು ಸನಾತನವಾಗುತ್ತದೆ ಎನ್ನುವ ಆತಂಕ ಅವರಿಗೆ ಇದೆ. ನಮ್ಮ ಒಳಗೆ ಬಂದು ಧರ್ಮ ಒಡೆದು ನಮ್ಮನ್ನು ದುರ್ಬಲ ಮಾಡುವ ಕೆಲಸ ನಡೆಯುತ್ತಿದೆ. ನಾವು ಧರ್ಮವನ್ನು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದಲ್ಲಿ ಶಿವಾಚಾರ್ಯ ರತ್ನ ಲಿಂಗೈಕ್ಯ ಶ್ರೀ ಷ.ಬ್ರ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ 10 ನೇಯ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬಾಳೆಹೊನ್ನೂರು ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಜನಜಾಗೃತಿ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇವತ್ತು ಕನ್ನಡ ನಾಡಿನಲ್ಲಿ ಧರ್ಮವನ್ನು ಜಾಗೃತ ಮಾಡಿ, ಧರ್ಮವನ್ನು ಉಳಿಸುವ ಪ್ರಯತ್ನ ಕಳೆದ ನಲವತ್ತು ವರ್ಷದಿಂದ ನಿರಂತರವಾಗಿ ಪರಮಪೂಜ್ಯ ರಂಭಾಪುರಿ ಸ್ವಾಮೀಜಿಗಳು ಮಾಡುತ್ತ ಬಂದಿದ್ದಾರೆ. ಭಕ್ತಿ ಎಂದರೆ ಮನದಾಳದಲ್ಲಿರುವ ಭಾವನೆ ಯಾರಾದರೂ ಹೇಳಿಕೊಟ್ಟು ತೀರ್ಥ ಸ್ಥಳಕ್ಕೆ ಹೋದರೆ ಅದು ಭಕ್ತಿ ಆಗುವುದಿಲ್ಲ. ದೇವರನ್ನು ಹುಡುಕಿಕೊಂಡು ಹೋಗುವುದು ಅವಶ್ಯಕತೆ ಇಲ್ಲ. ದೇವರ ನಮ್ಮೊಳಗೆ ಇದ್ದಾನೆ. ಯಾರು ದೇವರನ್ನು ಹುಡುಕಿಕೊಂಡು ಹೋಗುತ್ತಾರೆ. ಅವರಿಗೆ ತಮ್ಮ ಮೇಲೆ ವಿಶ್ವಾಸ ಇಲ್ಲ ಅಂತ ಅರ್ಥ, ನಮ್ಮೊಳಗಿರುವ ದೇವರನ್ನು ನೋಡಲು ಆಗುವುದಿಲ್ಲ. ಆದರೆ, ಮನಸ್ಸು ಮಾಡಿದರೆ ಅದನ್ನು ಅನುಭವಿಸಬಹುದು, ಅದಕ್ಕೆ ಮಠ, ಗುರು ಅವಶ್ಯಕತೆ ಇದೆ. ಭಕ್ತಿ ಎಂದರೆ ಉತ್ಕೃಷ್ಟವಾಗಿರುವ ಪ್ರೀತಿ, ಕರಾರು ರಹಿತವಾಗಿರುವ ಪ್ರೀತಿ ಅದೇ ಭಕ್ತಿ, ಕರಾರು ರಹಿತವಾದ ಪ್ರೀತಿ ಎಂದರೆ ದೇವರಿಗೆ ನಮಸ್ಕಾರ ಮಾಡಿ ಲೋಕಕಲ್ಯಾಣ ಮಾಡುವಂತೆ ಬೇಡಿಕೊಂಡರೆ ಅದರಲ್ಲಿ ನಮ್ಮ ಕಲ್ಯಾಣವೂ ಆಗುತ್ತದೆ ಎಂದು ಹೇಳಿದರು.

ಸತ್ಯ ಯುಗದಲ್ಲಿ ಏಕಾತ್ಮ ಆಯ್ತು. ದ್ವಾಪಾರ ಯುಗದಲ್ಲಿ ಏಕಾತ್ಮದ ಜೊತೆಗೆ ಪರಮಾತ್ಮ ಬಂದ ತ್ರೇತಾಯುಗದಲ್ಲಿ ಪರಮಾತ್ಮನ ಕಾಣಲು ಗುರುಗಳ ಉದಯ ಆಯಿತು. ಇದು ಗುರು ಭಕ್ತರ ನಡುವಿನ ಸಂಬಂಧ. ದೇವರನ್ನು ಯಾವ ರೀತಿ ಆರಾಧಿಸಬೇಕು ಎಂಬ ಸಂಸ್ಕಾರ ಕೊಟ್ಟಿರುವುದು ಪರಮಪೂಜ್ಯರು. ಕಲಿಯುಗ ಎಲ್ಲದಕ್ಕೂ ಪಶ್ನೆ ಮಾಡುತ್ತದೆ. ಪ್ರಶ್ನೆ ಮಾಡುತ್ತ ನಮ್ಮ ನಂಬಿಕೆ, ಭಾವನೆ, ಸತ್ವವನ್ನು, ಸಾತ್ವಿಕ ಭಾವನೆಯನ್ನು ಪ್ರಶ್ನಿಸುತ್ತೇವೆ. ಒಳ್ಳೆಯ ತನಕ್ಕಷ್ಟೆ ಪಶ್ನೆ ಮಾಡುತ್ತೇವೆ. ಕೆಟ್ಟದನ್ನು ಮಾಡುವುದಕ್ಕೆ ಪ್ರಶ್ನಿಸುವುದಿಲ್ಲ. ಸತ್ಯಕ್ಕೆ ಗೆಳೆಯರಿಲ್ಲ. ಸುಳ್ಳಿಗೆ ಗೆಳೆಯರಿದ್ದಾರೆ. ಸುಳ್ಳು ತಾತ್ಕಾಲಿಕವಾಗಿ ನಡೆಯುತ್ತದೆ. ಅಂತಿಮವಾಗಿ ಸತ್ಯವೇ ಉಳಿಯುತ್ತದೆ ಎಂದರು.

ತಂದೆ ಮಗನ ಸಂಬಂಧ

ಭಾರತದಲ್ಲಿ ಚರ್ಚೆಯಾಗುವ ಎಲ್ಲ ವಿಚಾರಗಳು ಕರ್ನಾಟಕದಲ್ಲಿ ಚರ್ಚೆಯಾಗುತ್ತವೆ. ನನ್ನ ಪರಮಪೂಜ್ಯರ ನಡುವಿನ ಸಂಬಂಧ ತಂದೆ ಮಗನ ಸಂಬಂಧ ಇದೆ. ನಾನು ಸಿಎಂ ಆಗಲಿ ಆಗದಿರಲಿ, ಅವರು ನನ್ನನ್ನು ಬಸಣ್ಣ ಎಂದು ಕರೆದಾಗ ನನಗೆ ರೋಮಾಂಚನ ಆಗುತ್ತದೆ. ಅದರಲ್ಲಿ ತಂದೆಯಪ್ರೀತಿ ಮಮಕಾರ ಇದೆ ಎಂದು ಭಾವಿಸುತ್ತೇನೆ. ನಾನು ಕೆಲವು ವಿಚಾರಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತೇನೆ. ಪರಮಪೂಜ್ಯರು ಪೀಠಾಧ್ಯಕರಾಗುವಾಗ ಹೇಗೆ ಆದರು, ಭಕ್ತರ ಸಮೂಹವನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡರು, ಪೀಠಕ್ಕೆ ಎಲ್ಲ ಭಕ್ತರು ಬರಲು ಆಗುವುದಿಲ್ಲ ಎಂದು ತಾವೂ ಪೀಠವನ್ನು ಊರಿಗೆ ತಂದಿದ್ದಾರೆ. ಹಳ್ಳಿ ಹಳ್ಳಿಗೆ ಬರುತ್ತಿದ್ದಾರೆ ಎಂದರು.

ಧರ್ಮ ಒಡೆಯುವ ಕೆಲಸ

ಇತ್ತೀಚೆಗೆ ಧರ್ಮವನ್ನೇ ಪ್ರಶ್ನೆ ಮಾಡುವುದು, ಇಲ್ಲ ಸಲ್ಲದ ವಿಚಾರ ತರುವುದು. ಧರ್ಮದ ಮೂಲಕ್ಕೆ ಹಲವಾರು ಪ್ರಶ್ನೆ ಮೂಡಿಸುವುದು, ಬೇಡದ ವಿಚಾರಗಳನ್ನು ಜನ ಸಮುದಾಯದಲ್ಲಿ ಹಾಕಿ ವಿಭಜಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಪರಮಪೂಜ್ಯರಿಂದ ಮಾರ್ಗದರ್ಶನ ಆಗಬೇಕಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ನಮ್ಮ ಧರ್ಮ ಪ್ರೀತಿಯಿಂದ, ಆತ್ಮೀಯತೆಯಿಂದ ನಡೆದುಕೊಳ್ಳುವಂತೆ ಹೇಳುತ್ತದೆ. ಕೆಲವು ಧರ್ಮ ಯಾರನ್ನಾದರೂ ಕೊಲೆ ಮಾಡಿದರೆ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ. ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಇರುವುದು ಭಾರತದಲ್ಲಿ ಈ ಸಂಸ್ಕಾರ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಲೇ ಇದೆ. ಇಲ್ಲಿರುವ ಸನಾತನ ಹಿಂದೂ ವಿಚಾರ ಜೀವಂತ ಇದ್ದರೆ ಒಂದಿಲ್ಲೊಂದು ದಿನ ಜಗತ್ತು ಹಿಂದೂ ಸನಾತನವಾಗುತ್ತದೆ ಎನ್ನುವ ಆತಂಕ ಅವರಿಗೆ ಇದೆ. ನಮ್ಮ ಒಳಗೆ ಬಂದು ನಮ್ಮನ್ನು ದುರ್ಬಲ ಮಾಡುವ ಕೆಲಸ ನಡೆಯುತ್ತದೆ ಎಂದರು.

ನಾವು ಧರ್ಮವನ್ನು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ನಾವೆಲ್ಲ ಭಾರತೀಯರು ಎಂದು ಗುರುತಿಸಿಕೊಳ್ಳುತ್ತೇವೆ. ನಮಗೆ ಒಂದು ಅಸ್ಥಿತ್ವ ಇದೆ. ಸಂಸ್ಕಾರ, ಸಂಸ್ಕೃತಿ, ಮನಸ್ಸಿಗೆ ಶಾಂತಿ ಕೊಡುವ ಮಾನವೀಯ ಗುಣಗಳನ್ನು ಕೊಡುವ ಧರ್ಮ ಹಿಂದೂ ಧರ್ಮ ಅದಕ್ಕಾಗಿ ರೇಣುಕಾಚಾರ್ಯ ಅವರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದರು. ಕಾಮ, ಕ್ರೋಧ, ಮದ, ಮತ್ಸರವನ್ನು ಮೀರಿದವನು ಮಾನವ. ಅದಕ್ಕೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದರು. ಸಕಲ ಜೀವಾತ್ಮರಲ್ಲಿ ಲೇಸು ಬಯಸು. ದಯವೇ ಧರ್ಮದ ಮೂಲ ಎಂದು ಬಸವಣ್ಣನವರು ಹೇಳಿದ್ದಾರೆ. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬಸವಣ್ಣ ದಯವೇ ಧರ್ಮದ ಮೂಲವಯ್ಯ ಎಂದರು. ಅದನ್ನು ಭಿನ್ನವಾಗಿ ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡದೇ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು. ನಮ್ಮ ನಾಡು, ಸಂಸ್ಕಾರಕ್ಕೆ ಐದು ಸಾವಿರ ವರ್ಷಗಳ ಇತಿಹಾಸ ಇದೆ. ನಮಗೆ ಚರಿತ್ರೆ ಇದೆ. ಚಾರಿತ್ರ ಬೇಕಿದೆ. ಅದಕ್ಕೆ ಸತ್ಯದಿಂದ ನಡೆಯಬೇಕು. ಅದನ್ನು ಪರಮಪೂಜ್ಯರು ದಾರಿ ತೋರಿಸಿದ್ದಾರೆ. ಅಂತಹ ಧರ್ಮದ ದಾರಿಯಲ್ಲಿ ನಾವು ನಡೆಯೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಅರುಣಕುಮಾರ ಪೂಜಾರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *