ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಗೆ ಹಿಡಿಯಲು ಹೋದ ಹುಡುಗನನ್ನು ನಾಗರ ಹಾವು ಕಡಿದು ಆತ ಮೃತಪಟ್ಟಿರುವ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ರಜಾಕ್ (17) ಹಾವು ಕಡಿತದಿಂದ ಮೃತಪಟ್ಟ ಹುಡುಗ. ಹಾವು ಕಚ್ಚಿರುವ ವೀಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮನೆಯೊಂದಕ್ಕೆ ಬಂದಿದ್ದ ನಾಗರಹಾವನ್ನು ಅಬ್ದುಲ್ ರಜಾಕ್ ಹಿಡಿಯಲು ಯತ್ನಿಸಿದಾಗ ಕೈಗೆ ಹಾವು ಕಚ್ಚಿದೆ. ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಯಿಂದ ಆತ ಹಾವು ಹಿಡಿಯಲು ಹೋಗಿದ್ದ ಎನ್ನಲಾಗಿದೆ. ಹಾವಿನ ಬಾಲವನ್ನು ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ.
ಹಾವು ಕಚ್ಚಿದ ಬಳಿಕ ಹುಡುಗ ಎರಡು ತಾಸು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಈ ಕುರಿತು ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನ ರಕ್ಷಿಸಲು ಹೋಗಿ ಕೊಲೆಯಾದ ತಾಯಿ
ಮಗನ ಮೇಲಿನ ದಾಳಿಯನ್ನು ತಡೆಯಲು ಹೋಗಿ ಮಹಿಳೆ ಕೊಲೆಯಾಗಿರುವ ಘಟನೆ ಶಿವಮೊಗ್ಗ ದುಮ್ಮಳ್ಳಿ ಗ್ರಾಮದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ. ಗಂಗಮ್ಮ (45) ಮೃತ ಮಹಿಳೆ. ಆರೋಪಿಗಳಾದ ಹರೀಶ್ ಮತ್ತು ನಾಗೇಶ್ರನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದೇಶ್ವರ ಬಡಾವಣೆಯಲ್ಲಿ ರಾತ್ರಿ ಆರೋಪಿಗಳಾದ ಹರೀಶ್ ಮತ್ತು ನಾಗೇಶ್ ಬೈಕ್ನಲ್ಲಿ ತೆರಳುತ್ತಿದ್ದಾಗ ಅದೇ ಬಡಾವಣೆಯ ಮಂಜುನಾಥ್ ಎಂಬವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ಗಾಯಗೊಂಡ ಮಂಜುನಾಥನಿಗೆ ಗಂಗಮ್ಮ ಉಪಚರಿಸಿದ್ದರು. ಮಂಜುನಾಥ್ ತಲೆಗೆ ಅರಿಶಿಣ ಹಚ್ಚಿ, ನೀರು ಕುಡಿಸಿದ್ದರು.
ಇದೇ ವಿಚಾರಕ್ಕೆ ಆರೋಪಿಗಳು ಗಂಗಮ್ಮ ಅವರ ಪುತ್ರ ಜೀವನ್ ಬಳಿ ಗಲಾಟೆ ಮಾಡಿದ್ದಾರೆ. ಮನೆಯಿಂದ ಮಚ್ಚು ತಂದು ಜೀವನ್ ಮೇಲೆ ಬೀಸಿದ್ದು, ಈ ವೇಳೆ ಅಲ್ಲೇ ಇದ್ದ ಗಂಗಮ್ಮ ತಲೆ ಮತ್ತು ಕುತ್ತಿಗೆ ಭಾಗವನ್ನು ಮಚ್ಚು ಸೀಳಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತುಂಗಾ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


