ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಟಿ ಹಾಗೂ ಪತ್ನಿ ಹೇಮಮಾಲಿನಿ ಸ್ಪಷ್ಟನೆ ನೀಡಿದ್ದಾರೆ.
ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ ದಾಖಲಿಸಲಾಗಿದ್ದು, 89 ವರ್ಷದ ಧರ್ಮೆಂದ್ರ ಮೃತಪಟ್ಟಿದ್ದಾರೆ ಎಂದು ಸೋಮವಾರ ರಾತ್ರಿ ಹರಡಿದ ವದಂತಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಧರ್ಮೆಂದ್ರ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡಬೇಡಿ ಎಂದು ಹೇಮಮಾಲಿನಿ ಎಕ್ಸ್ ಪೋಸ್ಟ್ ನಲ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬೆಳವಣಿಗೆಗಳ ನಡುವೆ, ಪತ್ನಿ ಹೇಮಾ ಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್ ಅವರು ಧರ್ಮೇಂದ್ರ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ವೈದ್ಯರ ವೀಕ್ಷಣೆಯಲ್ಲಿದ್ದು, ಸ್ಥಿರವಾಗಿದ್ದಾರೆ. ನಟನ ಶೀಘ್ರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.
“ಸದ್ಯ ನಡೆಯುತ್ತಿರುವ ಘಟನೆಗಳು ಕ್ಷಮೆಗೆ ಅರ್ಹವಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಸುದ್ದಿ ವಾಹಿನಿಗಳು ಹೇಗೆ ಸುಳ್ಳು ಸುದ್ದಿಗಳನ್ನು ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಗೆ ಸರಿಯಾದ ಗೌರವ ನೀಡಿ” ಎಂದು ಪತ್ನಿ ಹೇಮಾ ಮಾಲಿನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


