Tuesday, November 11, 2025
Menu

ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ : ಕೇಂದ್ರವೇ ತನಿಖೆ ಮಾಡಲಿ ಎಂದ ಸಿಎಂ

siddaramiah

ಚುನಾವಣೆ ವೇಳೆಯೇ ಬಾಂಬ್ ಬ್ಲಾಸ್ಟ್ ಗಳ ಬಗ್ಗೆ ಕೇಂದ್ರ ಸರ್ಕಾರವೇ ಹೇಳಬೇಕು. ಕೇಂದ್ರವೇ ತನಿಖೆ ನಡೆಸಿ ಉತ್ತರಿಸಲಿ‌. ನಿನ್ನೆಯ ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಬಾಂಬ್ ಬ್ಲಾಸ್ಟ್ ಗಳು ಆಗುತ್ತಿವೆ ? ದೆಹಲಿ ಬ್ಲಾಸ್ಟ್ ಇವತ್ತಿನ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಎಂ ಹೀಗೆ ಉತ್ತರಿಸಿದರು. ಬಾಂಬ್ ಬ್ಲಾಸ್ಟ್ ಗಳು ಆಗಬಾರದು. ಅಮಾಯಕರ ಜೀವಹಾನಿ ಬೇಸರದ ಸಂಗತಿ ಎಂದರು.

KDP ಸಭೆಯ ಕುರಿತು  ಮೈಸೂರಿನ  ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಭಾರತವನ್ನು ಒಂದು ಧರ್ಮದ ದೇಶ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಭಾರತ ಸಂವಿಧಾನಬದ್ಧ ಬಹುತ್ವದ ದೇಶ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಸಂಘಟಿತ ಅಪರಾಧಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಪರಾಧ ಪ್ರಮಾಣಗಳು ಹೆಚ್ಚಾದರೆ ಪೊಲೀಸ್ ಅಧಿಕಾರಿಗಳೇ ಹೊಣೆ ಆಗ್ತಾರೆ. ಮೈಸೂರು ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಕೋಮುಗಲಭೆ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದ ತಕ್ಷಣ ಇಡೀ‌ ಜಿಲ್ಲೆಯಲ್ಲಿ ಈಗ ಅನಾಗರಿಕ ಘಟನೆಗಳು ಬಂದ್ ಆಗಿವೆ. ಅಲ್ಲಿ ಇಬ್ಬರು ಅಧಿಕಾರಿಗಳಿಂದ ಇಷ್ಟೆಲ್ಲಾ ಸಾಧ್ಯ ಆಗುತ್ತೆ ಎನ್ನುವುದಾದರೆ ಉಳಿದ ಕಡೆಗಳಲ್ಲೂ ಸಾಧ್ಯವಿದೆ. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿ, ವೃತ್ತಿಪರವಾಗಿ ನಡೆದುಕೊಂಡರೆ ಸಾಕು ಎನ್ನುವ ಸೂಚನೆ ನೀಡಿರುವುದಾಗಿ ತಿಳಿಸಿದರು.

DC, AC, ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಶೀರ್ಘ ಇತ್ಯರ್ಥ ಪಡಿಸಲು ಸೂಚನೆ ನೀಡಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಎರಡೂ ವರ್ಷಗಳಲ್ಲಿ ಇದ್ದ 8 ಸಾವಿರ ಪ್ರಕರಣಗಳಲ್ಲಿ ಈಗಾಗಲೇ 7540 ರಷ್ಟು ಪ್ರಕಣಗಳು ಇತ್ಯರ್ಥ ಆಗಿವೆ. ಉಳಿದವೂ ಬೇಗ ಇತ್ಯರ್ಥ ಆಗಬೇಕು ಎನ್ನುವ ಸೂಚನೆ ನೀಡಿದ್ದೇನೆ ಎಂದು ಹೇಳಿದರು.  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ದಿಢೀರ್‌ ಭೇಟಿ ನೀಡಿ ಊಟ ಮತ್ತು ಹಾಸ್ಟೆಲ್ ಗುಣಮಟ್ಟ ಪರಿಶೀಲಿಸಬೇಕು ಎನ್ನುವ ಸೂಚನೆ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು 

ನಾನು ಮೈಸೂರು ಜಿಲ್ಲೆಯವನೇ ಆಗಿರುವುದರಿಂದ ನಾನೇ KDP ಸಭೆ ನಡೆಸ್ತೇನೆ. ಪೊಲೀಸ್ ಅಧಿಕಾರಿಗಳಾಗಳು‌ ಘಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಪರಾಧಿಗಳು, ರಿಯಲ್ ಎಸ್ಟೇಟ್, ರೌಡಿಗಳನ್ನು ಹೊರತುಪಡಿಸಿ ಪೊಲೀಸರು ಸಾರ್ವಜನಿಕರ ಜೊತೆ ಉತ್ತಮ‌ವಾಗಿ ವರ್ತಿಸಬೇಕು ಎಂದರು.

ಅಭಿವೃದ್ಧಿ ಕಾರ್ಯಗಳು, ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಮಿತಿ ರಚಿಸಲಾಗಿದೆ . ಗ್ರೇಟರ್ ಮೈಸೂರು ಬಗ್ಗೆ ಪ್ರಾಥಮಿಕ ಚರ್ಚೆ ಆಗಿದೆ. ಇನ್ನಷ್ಟು ಸಮಗ್ರ ಚರ್ಚೆ ಬಳಿಕ ಕ್ಯಾಬಿನೆಟ್ ನಲ್ಲಿ ಇಟ್ಟು ಅಲ್ಲೂ ಚರ್ಚಿಸಲಾಗುವುದು. ಕ್ಯಾಬಿನೆಟ್ ತೀರ್ಮಾನದಂತೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಸರಿಯಲ್ಲ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಫಲಿತಾಂಶ ಉತ್ತಮವಾಗಿರಬೇಕು, ಇದಕ್ಕೆ ಏನು ಮಾಡಬೇಕು ಎನ್ನುವ ಬ್ಲೂಪ್ರಿಂಟ್‌ ಸಿದ್ದಪಡಿಸಲು ಸೂಚಿಸಿದ್ದೇನೆ ಎಂದರು.

ಮೈಸೂರು ಅಭಿವೃದ್ಧಿಯ ವೇಗ ಹೆಚ್ಚಾಗಬೇಕು. ನಿಗದಿತ ಅವಧಿಯ ಒಳಗೆ ಕೆಲಸಗಳು ಪರ‍್ಣಗೊಳ್ಳಬೇಕು ಎನ್ನುವ ಸೂಚನೆಯನ್ನು ಹಿಂದಿನ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದೆ. ಆದರೂ ಈ ಬಗ್ಗೆ ಸಮಾಧಾನ ಆಗುವ ಮಟ್ಟಿಗೆ ವೇಗ ಪಡೆದುಕೊಂಡಿಲ್ಲ ಎಂದು ತಿಳಿಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮೈಸೂರು ಜನತೆಯ ಸಮಸ್ಯೆಗಳನ್ನು ಆಲಿಸುವ ಮತ್ತು ಪರಿಹಾರ ಒದಗಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.

ಮೈಸೂರಿನ ಜನತೆ, ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ತುಂಬಾ ಮಂದಿ ಬರ‍್ತಾರೆ. ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ನನಗೆ ಕಾಯುತ್ತಾ ಇರುತ್ತಾರೆ. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ, ಮೈಸೂರಿನ ಕಚೇರಿಗಳಲ್ಲೇ ಕುಳಿತು ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ, ಕೇಳಿ ಬಗೆಹರಿಸಿದ್ದರೆ ಅವರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುತ್ತಿರಲಿಲ್ಲ. ಜನರನ್ನು ಅಲೆದಾಡಿಸುವುದು ಅಕ್ಷಮ್ಯ. ಇದನ್ನು ನಾನು ಸಹಿಸಲ್ಲ ಎಂದು ಹೇಳಿದರು.

ಸಿಇಒ ಮತ್ತು ಇತರೆ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್‌ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳು, ವಿಎ ಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ ಎಂದು ಸೂಚಿಸಿದ್ದೇನೆ. ಹಾಸ್ಟೆಲ್‌ಗಳಲ್ಲಿ ಊಟದ ವ್ಯವಸ್ಥೆಯನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮತ್ತು ಮೈಸೂರು ಜಿಲ್ಲೆಯಲ್ಲೂ ಉತ್ತಮ ಮಳೆ ಆಗಿದೆ. ಕೃಷಿ ಚಟುವಟಿಗೆ ತೊಂದರೆ ಇಲ್ಲ. ಕುಡಿಯುವ ನೀರಿಗೂ ತೊಂದರೆ ಆಗುವುದಿಲ್ಲ.  ಜಂಟಿ ಸಮೀಕ್ಷೆ ಬಳಿಕ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಕೃಷಿ-ತೋಟಗಾರಿಕೆ-ನೀರಾವರಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಭೆ ಮಾಡಿ ರೈತರಿಗೆ ನೀರಿನ ನಿರ್ವಹಣೆ ಮತ್ತು ವೈಜ್ಞಾನಿಕ ಬಿತ್ತನೆ ಬಗ್ಗೆ ಹಾಗೂ ಇಳುವರಿ ಹೆಚ್ಚಿಗೆ ಬರುವ ಹೊಸ ಹೊಸ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ಹಂಚಿ ಕೊಳ್ಳಬೇಕು. ಜಂಟಿ ಸಭೆಗಳನ್ನು ನಡೆಸಬೇಕು.  ಹುರುಳಿ, ಮುಸುಕಿನ ಜೋಳ ಬಿತ್ತನೆ ಇನ್ನೂ ಆಗಬೇಕಿದೆ. ಕೆಲವು ರೈತರು ಬೆಳೆಯನ್ನು ಬದಲಾಯಿಸಿದ್ದಾರೆ. ಗೊಬ್ಬರ, ಬೀಜ ನಮ್ಮಲ್ಲಿ ಸಂಗ್ರಹ ಇದೆ. ರೈತರಿಗೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ವನ್ನೂ ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ. ಯೂರಿಯಾ ಅಗತ್ಯ ಇರುವುದಕ್ಕಿಂತ ಹೆಚ್ಚು ಸಂಗ್ರಹವಿದೆ ಎಂದರು.

ಕುರಿಗಾಹಿಗಳಿಗೆ ಆಗುತ್ತಿದ್ದ ತೊಂದರೆಗಳು ಮತ್ತು ಕಳ್ಳ ಕಾಕರಿಂದ ರಕ್ಷಣೆ ಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ ಎನ್ನುವ ವರದಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು. ಹಾಲಿನ ಉತ್ಪಾದನೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರ ಅಂಕಿ ಅಂಶಗಳನ್ನು ಮುಂದಿಟ್ಟ ಮುಖ್ಯಮಂತ್ರಿಗಳು ಉತ್ಪಾದನೆ ಹೆಚ್ಚಾದ ಹಾಗೆ ಮಾರುಕಟ್ಟೆ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಿ ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ಸೂಚಿಸಿದರು.

ಮಾನವ-ಹುಲಿ ಸಂಘರ್ಷದ ಬಗ್ಗೆ ಗಂಭೀರ ಚರ್ಚೆ

ಹುಲಿ-ಆನೆಗಳು ಅರಣ್ಯದಿಂದ ಹೊರಗೆ ಬರಲು ಏನು ಕಾರಣ ? ವೈಜ್ಞಾನಿಕ‌ ಕಾರಣ ನೀಡಿ: ವೈಜ್ಞಾನಿಕ ಮಾರ್ಗದಲ್ಲಿ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯುವ ತುರ್ತು ಇದೆ ಎಂದು ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ. ಕಾಡಿನಲ್ಲಿರುವ ನೀರಿನ ಗುಂಡಿಗಳನ್ನು ತುಂಬಿಸಬೇಕು.‌ ಲಾಂಟೆನಾ ತೆಗೆಸಬೇಕು. ಅರಣ್ಯದಲ್ಲಿ ಮೇವು ಬೆಳೆಸಬೇಕು. ಆನೆ, ಹುಲಿಗಳು ಹೊರಗೆ ಬರುವ ಬಗ್ಗೆ ನಿರಂತರ ನಿಗಾ ವಹಿಸಬೇಕು. ಅರಣ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಪ್ರತ್ಯೇಕವಾದ ಸಭೆ ಕರೆಯುತ್ತಿದ್ದೇವೆ. ಸಮಗ್ರ ಮಾಹಿತಿ ಮತ್ತು ಪರಿಹಾರದ ಬಗ್ಗೆ ಅಧ್ಯಯನ‌ ನಡೆಸಿ ಪೂರ್ತಿ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು ಎಂದು ಸೂಚಿಸಿದ್ದೇನೆ ಎಂದರು.

ಈಗಾಗಲೇ ಹೆಲ್ಪ್ ಲೈನ್ ತೆರೆಯಲಾಗಿದೆ. ಕಮಾಂಡ್ ಸೆಂಟರ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆಗೆ ಬಂದಿರುವ 7000 ಅರ್ಜಿಗಳಲ್ಲಿ 5900 ಅರ್ಜಿಗಳು ತಿರಸ್ಕರಿಸಲ್ಪಟ್ಟಿ ರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು. ಇವು 2019-20 ರಿಂದ ತಿರಸ್ಕರಿಲ್ಪಟ್ಟ ಅರ್ಜಿಗಳು. ತಿರಸ್ಕರಿಸುವಾಗ ಸ್ಪಷ್ಟವಾದ, ನೈಜವಾದ ಕಾರಣ ನೀಡದಿದ್ದರೆ ಅಂತಹ ಅರ್ಜಿಗಳನ್ನು ಮರುಪರಿಶೀಲನೆಗೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಳು ನನಗೆ ತಿಳಿಸಿದ್ದಾರೆಂದು ಸಿಎಂ ಮಾಹಿತಿ ನೀಡಿದರು.

ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿರಲುಸೂಚನೆ ನೀಡಿದ್ದೇನೆ. ಹಾಡಿಗಳು, ಅರಣ್ಯವಾಸಿಗಳ ವಿಚಾರದಲ್ಲಿ ಅಂತಃಕರಣದಿಂದ ವರ್ತಿಸಿ ಎನ್ನುವ ಸೂಚನೆ ನೀಡಿದ್ದೇನೆ. ಅಧಿಕಾರಿಗಳ ಹೊಂದಾಣಿಕೆ ಕೊರತೆಯಿಂದ, ಕರ್ತವ್ಯಲೋಪದಿಂದ ಮಾವ ಜೀವ ಹಾನಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದೇನೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಪ್ರತಿ ಹಾಸ್ಟೆಲ್‌ಗಳಿಗೆ ಒಬ್ಬ ನೋಡೆಲ್‌ ಅಧಿಕಾರಿಯನ್ನು ನೇಮಿಸಬೇಕು. ಆಹಾರದ ಗುಣಮಟ್ಟ, ಶೈಕ್ಷಣಿಕ ವಾತಾವರಣ, ಕಟ್ಟಡಗಳ ಸ್ಥಿತಿ ಗತಿಯನ್ನು ಅವಲೋಕಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಡಲ್‌ ಅಧಿಕಾರಿಗಳ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.

ಹೆಚ್‌.ಡಿ.ಕೋಟೆ ವ್ಯಾಪ್ತಿಯ ಹಾಡಿಗಳಲ್ಲಿನ ೧೬ ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ವಿದ್ಯುತ್‌ ಮಾತ್ರ ಬರುತ್ತಿಲ್ಲ. ಹಾಡಿಗಳ ಕುಡಿಯುವ ನೀರು, ಹಕ್ಕು ಪತ್ರ, ಅಂಗನವಾಡಿ, ಮನೆ, ಆಹಾರ ವಿತರಣೆ, ಹಾಡಿ ನಿವಾಸಿಗಳ ಅರಣ್ಯ ಉತ್ಪನ್ನ ಸಂಗ್ರಹ, ಮಾರಾಟದ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮತ್ತು ಅಸಹಾಕಾರದ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ಆಗಿ ಈ ಬಗ್ಗೆ ಸೂಕ್ತವಾಗಿ ವರ್ತಿಸಲು, ಅರಣ್ಯವಾಸಿಗಳ ಜೊತೆ ಅಂತಃಕರಣದಿಂದ ವರ್ತಿಸುವಂತೆ ಸೂಚಿಸಿದ್ದೇನೆ. ಅರಣ್ಯಾಧಿಕಾರಿಗಳ ಇಂಥಾ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರ ರೀತಿ ವರ್ತಿಸಬೇಡಿ. ಸ್ವಲ್ಪ ಉದಾರವಾಗಿ ವರ್ತಿಸಿ. ಮಾನವೀಯವಾಗಿ ನಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಆಹಾರ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ ಹಾಸ್ಟೆಲ್‌ಗಳ ಗುಣಮಟ್ಟ ಮತ್ತು ಆಹಾರ ಗುಣಮಟ್ಟದ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾ ಗಿದೆ. ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲೇ ಎಚ್ಚರಿಸಲಾಗಿದೆ. ಜಾತಿ ಆದಾಯ ಮತ್ತು ಜಾತಿ ಸಿಂಧು ಪ್ರಮಾಣ ಪತ್ರಗಳನ್ನು ನೀಡುವ ವಿಚಾರದಲ್ಲಿ ನಿಧಾನ ಮಾಡಬಾರದು. ತಕ್ಷಣ ನೀಡುವ ಪದ್ಧತಿ ರೂಢಿಸಿಕೊಳ್ಳಿ ಎನ್ನುವ ಸೂಚನೆಯನ್ನು ನೀಡಲಾಗಿದೆ ಎಂದರು.

ಹಾಲು, ಊಟ, ಸಮವಸ್ತ್ರ, ಶೂ, ಬಾಳೆಹಣ್ಣು, ಸ್ಕಾಲರ್‌ಶಿಪ್‌ ಸೇರಿ ಅಗತ್ಯ ಎಲ್ಲಾ ಸವವಲತ್ತುಗಳನ್ನು ಒದಗಿಸುತ್ತಿದ್ದರೂ ಶಾಲಾ ದಾಖಲಾತಿ ಪ್ರಮಾಣ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 2.5 ರಷ್ಟು ಕಡಿಮೆ ಆಗಿರುವುದಕ್ಕೆ ಕಾರಣ ಕೇಳಿ ಶಿಕ್ಷಕರ ಗುಣಮಟ್ಟ ಉನ್ನತೀಕರಿಸಿ, ದಾಖಲಾತಿ ಪ್ರಮಾಣ ಹೆಚ್ಚಿಸಿ ಎನ್ನುವ ಸೂಚನೆ ನೀಡಿದ್ದೇನೆ. ಆರೋಗ್ಯ ಮತ್ತು ಶಿಕ್ಷಣ ನನ್ನ ಮೊದಲ ಆಧ್ಯತೆ. ಮೈಸೂರು ಜಿಲ್ಲೆಗೆ ಎರಡೂ ಕ್ಷೇತ್ರಕ್ಕೆ ಅಗತ್ಯ ಸವಲತ್ತು ಮತ್ತು ಅನುದಾನಗಳನ್ನು ಕಲ್ಪಿಸುತ್ತಿದ್ದೇವೆ. ಆದರೆ ಫಲಿತಾಂಶ ಮತ್ತು ಕಾರ‍್ಯಕ್ಷಮತೆಯಲ್ಲಿ ಕೊರತೆ ಆಗಬಾರದು. ಇದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿದ್ದೇನೆ. ನೀವೂ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದೇನೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *