Tuesday, November 11, 2025
Menu

ನಕಲಿ ವೈದ್ಯಕೀಯ ದಾಖಲೆ ಸಲ್ಲಿಸಿ ಸಿಎಂ ಪರಿಹಾರ ನಿಧಿ ಪಡೆಯುತ್ತಿದ್ದ ಆರೋಪಿ ಅರೆಸ್ಟ್‌

ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಡೆಯುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಧನಂಜಯ (59) ಬಂಧಿತ ಆರೋಪಿಯಾಗಿದ್ದು, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೀಡಲಾಗುವ ಆರ್ಥಿಕ ಸಹಾಯ ಪಡೆಯಲು ನಕಲಿ ಆಸ್ಪತ್ರೆ ಬಿಲ್‌ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುತ್ತಿದ್ದ ಎಂಬುದು ಪತ್ತೆಯಾಗಿದೆ.

ಆರೋಪಿ ಧನಂಜಯ ಯಶವಂತಪುರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರ ಪಡೆದು ಮಾಹಿತಿಯನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿ ಪರಿಹಾರ ಹಣ ಪಡೆಯುತ್ತಿದ್ದ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬವರೂ ಈ ಕೆಲಸದಲ್ಲಿ ತೊಡಗಿದ್ದರು. ಕ್ಯಾತಣ್ಣ ಮತ್ತು ಮತ್ತೊಬ್ಬ ಆರೋಪಿ ಈಗಾಗಲೇ ಮೃತಪಟ್ಟಿದ್ದಾರೆ. ಅರ್ಜಿಗಳಲ್ಲಿನ ಕೆಲವು ಲೋಪಗಳನ್ನು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಮೇ ತಿಂಗಳಲ್ಲಿ ಗಮನಿಸಿದ್ದರೂ ಮೂಲವನ್ನು ಪತ್ತೆ ಮಾಡಲು ಆಗಿರಲಿಲ್ಲ.

ನವೆಂಬರ್​ 5ರಂದು ವಿಧಾನದ ಸೌಧದ ಎರಡನೇ ಮಹಡಿಯಲ್ಲಿರುವ ಮುಖ್ಯಮಂತ್ರಿಯ ಕಚೇರಿಗೆ ಬಂದ ಧನಂಜಯ, ನಕಲಿ ಅರ್ಜಿಗಳಲ್ಲಿ ಒಂದರ ಪಾವತಿ ವಿಳಂಬದ ಬಗ್ಗೆ ವಿಚಾರಿಸಿದ್ದಾನೆ. ಆತನ ಪ್ರಶ್ನೆಗಳಿಂದ ಅನುಮಾನಗೊಂಡ ಅಧಿಕಾರಿಗಳು ವಿಧಾನದ ಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬಯಲಾಗಿದೆ.

ಹಲವು ಜನರಿಂದ ಅವರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಆರೋಪಿ ಧನಂಜಯ ಸಂಗ್ರಹಿಸುತ್ತಿದ್ದ. ಅವರಿಗೆ ಪರಿಹಾರ ನಿಧಿ ಸಿಗುವಂತೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದ. ಹಣ ಬಿಡುಗಡೆಯಾದ ನಂತರ ಪ್ರತಿಯೊಬ್ಬರಿಂದ 50 ಸಾವಿರ ರೂ. ಕಮಿಷನ್‌ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *