ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರೂ ಸಹ ಭಯೋತ್ಪಾದಕರ ಭಾಗವಾಗಿದ್ದಾರೆಯೇ? ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ ಹಾಗೂ ಅವರ ಪಕ್ಷದವರಿಗೂ, ಅವರ ಆಡಳಿತಕ್ಕೂ ಇದು ಅನ್ವಯಿಸುತ್ತದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ದೆಹಲಿಯಲ್ಲಿ ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದ ಆವರಣದಲ್ಲಿ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗೆಗಿನ ಊಹಾಪೋಹಗಳ ಬಗ್ಗೆ ಕೇಳಿದಾಗ, “ನಾನು ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡುತ್ತೇನೆ” ಎಂದು ಉತ್ತರಿಸಿದರು.
“ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ” ಎಂದು ಹೇಳಿದರು.
“ಚುನಾವಣೆಗಳಲ್ಲಿ ಮತ ಕಳ್ಳತನ ನಡೆಯುತ್ತಿರುವ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ. ಈಗ ಮಹಾರಾಷ್ಟ್ರ, ಹರಿಯಾಣ, ಬಿಹಾರದಲ್ಲಿ ನಡೆಸಿರುವ ಅಕ್ರಮಗಳು ಬೆಳಕಿಗೆ ಬಂದಿವೆ” ಎಂದರು. “ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಂಕೇತಿಕವಾಗಿ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಹಸ್ತಾಂತರಿಸಿದ್ದೇವೆ. 100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ನಿಭಾಯಿಸಿದ್ದ ಜವಾಬ್ದಾರಿಯನ್ನು ಈಗ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ನಿಭಾಯಿಸು ತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮತದಾನದ ಹಕ್ಕು ರಕ್ಷಣೆ ಹೋರಾಟ ಮಾಡಿದ್ದೇವೆ. ಒಬ್ಬರಿಗೆ ಒಂದು ಮತ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಮತ ಕಳ್ಳತನವನ್ನು ಮೊದಲು ಪಚ್ಚೆ ಹಚ್ಚಿದ್ದೇ ನಮ್ಮ ರಾಜ್ಯದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ನಮ್ಮ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್, ಕೆಪಿಸಿಸಿ ತಂಡ ಸೇರಿ ಈ ಮತ ಕಳ್ಳತನ ಪತ್ತೆ ಮಾಡಿ ಎಐಸಿಸಿಗೆ ಮಾಹಿತಿ ನೀಡಿದೆವು” ಎಂದು ವಿವರಿಸಿದರು.
“ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್ ನಿಂದ ಈ ಹೋರಾಟ ಆರಂಭಿಸಲಾಯಿತು. ನಂತರ ಮಹಾರಾಷ್ಟ್ರ, ಹರಿಯಾಣ ಚುನಾವಣಾ ಅಕ್ರಮ ಬಯಲಾಗಿ ಈ ಹೋರಾಟ ಬಿಹಾರದವರೆಗೂ ಹಬ್ಬಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರ ನಿರ್ದೇಶನದ ಮೇರೆಗೆ ಈ ಅಭಿಯಾನ ಪೂರ್ಣಗೊಳಿಸಿದ್ದೇವೆ” ಎಂದರು.
“ನಮ್ಮ ಕಾರ್ಯಕರ್ತರು, ಬ್ಲಾಕ್, ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ವಿವಿಧ ಘಟಕಗಳ ಪರಿಶ್ರಮದಿಂದ ಸಂಗ್ರಹಿಸಲಾದ ಸಹಿಗಳನ್ನು ಸಲ್ಲಿಕೆ ಮಾಡಿದ್ದೇವೆ. ನಾವು ನಮ್ಮ ಕರ್ತವ್ಯ ಮಾಡಿದ್ದು, ಮೊನ್ನೆಯಷ್ಟೇ ನಾನು ಹಾಗೂ ಸಿಎಂ ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿದ್ದೇವೆ. ನಮ್ಮ ಕಾರ್ಯಕರ್ತರು ಈ ಅಭಿಯಾನವನ್ನು ಇನ್ನೂ ಮುಂದುವರಿಸುತ್ತಿದ್ದು, ನಂತರ ಸಂಗ್ರಹಿಸುವ ಸಹಿ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಸಲ್ಲಿಕೆ ಮಾಡುತ್ತೇವೆ” ಎಂದು ಹೇಳಿದರು.
“ಮತಕಳ್ಳತನ ಖಂಡಿತವಾಗಿ ಆಗಿದೆ. ಬಿಹಾರದಲ್ಲಿ ಎಸ್ಐಆರ್ ನಡೆದಾಗ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಏಕೆ ಸೂಚನೆ ನೀಡಿತು? ರಾಹುಲ್ ಗಾಂಧಿ ಅವರು ಇದರ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದ ನಂತರ ಮಾಧ್ಯಮಗಳು ಬೆಂಗಳೂರಿಗೆ ಬಂದು ಉಲ್ಲೇಖಿತ ಮನೆಗಳ ಸಂಖ್ಯೆ ಸೇರಿದಂತೆ ಯಾವ, ಯಾವ ಕಡೆ ಅಕ್ರಮ ನಡೆದಿದೆ ಎಂದು ಫ್ಯಾಕ್ಟ್ ಚೆಕ್ ಮಾಡಿದವು. ಯಾವ ಸರ್ಕಾರವೂ ಅದರ ವೈಫಲ್ಯ ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದ ಕೆಲಸವೇ ವೈಫಲ್ಯಗಳನ್ನು ಕಂಡುಹಿಡಿದು ತಿಳಿಸುವುದು” ಎಂದರು.


