ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜೋ ರೂಟ್ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದಿದ್ದಾರೆ.
ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು 544 ರನ್ ಗಳಿಸಿದ್ದು, ಮೊದಲ ಇನಿಂಗ್ಸ್ ನಲ್ಲಿ ಭಾರತ ವಿರುದ್ಧ 186 ರನ್ ಮುನ್ನಡೆ ಸಾಧಿಸಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 358 ರನ್ ಗಳಿಸಿದೆ.
ರೂಟ್ ಮತ್ತು ಪೋಪ್ (123 ಎಸೆತಗಳಲ್ಲಿ 71ರನ್) ಜೊತೆಯಾಗಿ 3ನೇ ವಿಕೆಟ್ ಗೆ 135 ರನ್‌ಗಳ ಗೆಲುವಿನ ಜೊತೆಗೂಟ ನಿಭಾಯಿಸಿ ತಂಡವನ್ನು ಆಧರಿಸಿದರು. ಈ ಮೂಲಕ ಅತೀ ಹೆಚ್ಚು ಶತಕ ಸಿಡಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಸಚಿನ್ (51), ಕಾಲಿಸ್ (45), ಪಾಂಟಿಂಗ್ (41) ಕುಮಾರ ಸಂಗಕ್ಕಾರ (38) ಜೊತೆ ರೂಟ್ ಸ್ಥಾನ ಹಂಚಿಕೊಂಡಿದ್ದಾರೆ.
ಜೋ ರೂಟ್ 248 ಎಸೆತಗಳಲ್ಲಿ 14 ಬೌಂಡರಿ ಸಹಾಯದಿಂದ 150 ರನ್ ಬಾರಿಸಿ ಔಟಾದರು. ಇದು ರೂಟ್ ಗೆ 38ನೇ ಶತಕವಾಗಿದ್ದು, ತವರಿನಲ್ಲಿ 9ನೇ ಶತಕವಾಗಿದೆ. ಈ ಮೂಲಕ ರೂಟ್ ತವರಿನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಡಾನ್ ಬ್ರಾಡ್ಮನ್ ದಾಖಲೆ ಮುರಿದು ವಿಶ್ವದಾಖಲೆ ಬರೆದರು.
ರೂಟ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಗಳಿಸಿದರು.
ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಜೋ ರೂಟ್ 13,380 ರನ್ ನೊಂದಿಗೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದರು. ರಿಕಿ ಪಾಂಟಿಂಗ್ 13,378, ಮೂರನೇ ಸ್ಥಾನಕ್ಕೆ ಕುಸಿದರೆ, ರಾಹುಲ್ ದ್ರಾವಿಡ್ 13,288 ನಾಲ್ಕನೇ ಸ್ಥಾನಕ್ಕೆ ಜಾರಿದರೆ, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 13,289 ರನ್ ನೊಂದಿಗೆ 5ನೇ ಸ್ಥಾನ ತಲುಪಿದರು.