ಬೆಂಗಳೂರು: ಹಾಲಿ ಚಾಂಪಿಯನ್ ಆರ್‌ಸಿಬಿಯು ಮುಂದಿನ ವರ್ಷ ತನ್ನ ಮನೆಯಂಗಳದಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.
ಜಸ್ಟೀಸ್ ಜಾನ್ ಮೈಕಲ್ ಡಿ’ಕುನ್ಹಾ ನೇತೃತ್ವದ ತನಿಖಾ ಸಮಿತಿಯ ವರದಿಯ ಪ್ರಕಾರ, ಎಂ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಈವೆಂಟ್‌ಗಳನ್ನು ಆಯೋಜಿಸಲು ಅನರ್ಹವೆಂದು ಹೇಳಿದೆ. ಹೀಗಾಗಿ ಮುಂದಿನ ಸಾಲಿನಲ್ಲಿ ಆರ್‌ಸಿಯು ಈ ಮೈದಾನದ ಹೊರತಾಗಿ ತನ್ನ ಮನೆಯಂಗಳವನ್ನು ಕಂಡುಕೊಳ್ಳಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ.
ಈ ವರದಿಯನ್ನು ಕರ್ನಾಟಕ ಸರ್ಕಾರವು ಸಂಪೂರ್ಣವಾಗಿ ಪರಿಗಣಿಸಿದರೆ, ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ದೊಡ್ಡ ಈವೆಂಟ್‌ಗಳನ್ನು ನಿರ್ಬಂಧಿಸಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ೨೦೨೫ರ ವಿಜಯೋತ್ಸವದ ಸಂದರ್ಭದಲ್ಲಿ ಜೂನ್ 4, 2025ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಭಗದಡದಿಂದ 11 ಜನರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.
ವರದಿಯು ಕ್ರೀಡಾಂಗಣದ ಹಲವು ದೋಷಗಳನ್ನು ಎತ್ತಿ ತೋರಿಸಿದ್ದು, ಇಲ್ಲಿ ಮುಂದೆ ಯಾವುದೇ `ಹೆಚ್ಚು ಜನಸಂದಣಿಯ ಈವೆಂಟ್’ಗಳನ್ನು ಆಯೋಜಿಸಬಾರದು ಎಂದು ಶಿಫಾರಸು ಮಾಡಿದೆ. ಸಾರ್ವಜನಿಕ ರಸ್ತೆಗಳಿಂದ ಪ್ರತ್ಯೇಕವಾದ, ಉದ್ದೇಶಿತ ಕ್ಯೂಯಿಂಗ್ ಮತ್ತು ಸಂಚಾರ ವಲಯಗಳು, ಸಾಮೂಹಿಕ ಪ್ರವೇಶ ಮತ್ತು ನಿರ್ಗಮನಕ್ಕೆ ಸಾಕಷ್ಟು ಗೇಟ್‌ಗಳು , ಜನಸಂದಣಿಯನ್ನು ನಿರ್ವಹಿಸಲು ಸಾಕಷ್ಟು ಪಾರ್ಕಿಂಗ್ ಮತ್ತು ಡ್ರಾಪ್-ಆಫ್ ಮೂಲಸೌಕರ್ಯ ಅತ್ಯಗತ್ಯ ಎಂದು ವರದಿ ಹೇಳಿದೆ.
ಈ ಕಾರಣದಿಂದಾಗಿ ಆರ್‌ಸಿಬಿಯು 2026ರ ಐಪಿಎಲ್ ಋತುವಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೃಹ ಪಂದ್ಯಗಳನ್ನು ಆಡಲು ಸಾಧ್ಯವಾಗದಿರಬಹುದು. ಅಧಿಕೃತ ತೀರ್ಮಾನ ಇಲ್ಲ: ಬಿಸಿಸಿಐ ಈ ನಿಷೇಧದ ಬಗ್ಗೆ ಇನ್ನೂ ಔಪಚಾರಿಕ ತೀರ್ಮಾನವನ್ನು ಘೋಷಿಸಿಲ್ಲ. ಆದರೆ, ಈ ದುರಂತವು ಕ್ರೀಡಾಂಗಣ ಸುರಕ್ಷತೆ ಮತ್ತು ಈವೆಂಟ್ ಆಯೋಜನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ, ಇದು ಆರ್‌ಸಿಬಿಯ ಐತಿಹಾಸಿಕ ಐಪಿಎಲ್ ಗೆಲುವಿನ ಮೇಲೆ ಕಪ್ಪು ಛಾಯೆ ಬೀರಿದೆ.
ಈ ಘಟನೆಯನ್ನು ಬಿಸಿಸಿಐ ಸಹ ತೀರಾ ಗಂಭೀರವಾಗಿ ಪರಿಗಣಿಸಿದ್ದು, ಆರ್‌ಸಿಯ ಸಂಘಟನಾ ಲೋಪವನ್ನು ಎತ್ತಿ ತೋರಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮಹಾರಾಜ ಕಪ್ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೇಕೇವಲ ಟಿವಿ ಕೆಮರಾಗಳ ಮುಂದೆ ಆಡಿಸಲು ಕೆಎಸ್‌ಸಿಎ ನಿರ್ಧರಿಸಿರುವುದು ಇಲ್ಲಿ ಉಲ್ಲೇಖಾರ್ಹ.