ಹರಿಯಾಣದಲ್ಲಿ 360 ಕೆಜಿ ಸ್ಫೋಟಕ ಹಾಗೂ ಅಪಾರ ಪ್ರಮಾಣದ ರೈಫಲ್ಸ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ಪತ್ತೆ ಹಚ್ಚುವ ಮೂಲಕ ಭಾರೀ ಪ್ರಮಾಣದ ಸ್ಫೋಟದ ಸಂಚನ್ನು ವಿಫಲಗೊಳಿಸಿದ್ದಾರೆ.
ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರು 360 ಕೆ.ಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ವೈದ್ಯ ನೀಡಿದ ಮಾಹಿತಿ ಆಧರಿಸಿ ಹರಿಯಾಣ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಸ್ಫೋಟಕ ಹಾಗೂ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಫರಿದಾಬಾದ್ ಪೊಲೀಸ್ ಕಮಿಷನರ್ ಸತೇಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲ ಮುಜಮ್ಮಿಲ್ ಶಕೀಲ್ ಎಂಬ ಇನ್ನೋರ್ವ ವೈದ್ಯ ಸಂಗ್ರಹಿಸಿದ್ದು, ಆರೋಪಿ ಮುಜಮ್ಮಿಲ್‌ನ್ನು ಬಂಧಿಸಲಾಗಿದೆ. ಈಗಾಗಲೇ ಆರೋಪಿ ರಾಥರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಸದ್ಯ ಈ ಸ್ಫೋಟಕಗಳ ಸಂಗ್ರಹಣೆ, ಸಾಗಾಣೆ ಹಿಂದಿನ ಜಾಲ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಅ.27ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೈದ್ಯ ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುವುದು ಕಂಡುಬಂದಿತ್ತು. ಅದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ತನಿಖೆ ವೇಳೆ ನೀಡಿದ್ದ ಮಾಹಿತಿ ಪ್ರಕಾರ, ಅನಂತ್‌ನಾಗ್ ಸರ್ಕಾರಿ ಕಾಲೇಜುವೊಂದರಲ್ಲಿ ರಾಥರ್ ಲಾಕರ್‌ನಿಂದ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.


