ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಿಎಂ ನಾನಾ ಇಲಾಖಾಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.
ರೇಷ್ಮೆ ಇಲಾಖೆ ಮತ್ತು ರೇಷ್ಮೆ ಉತ್ಪಾದನೆ ಬಗ್ಗೆ ರ‍್ಚೆ ನಡೆಯುವ ವೇಳೆ ರಾಜ್ಯದಲ್ಲಿ ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಮಹಿಳೆಯರು ಐದಾರು ಗಂಟೆ ಕ್ಯೂ ನಿಂತರೂ ಸೀರೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಸೀರೆ ಸಿದ್ದಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್ ನಾಥ್ ಮುಖ್ಯ ಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
*ಒಟ್ಟು ನೀರಾವರಿ ಭೂಮಿಯಲ್ಲಿ ವಾಡಿಕೆಗಿಂತ ೩೦೦೦ ಹೆಕ್ಟೇರ್ ಭೂಮಿಯಲ್ಲಿ ಕಡಿಮೆ ಬಿತ್ತನೆ ಆಗಿರುವುದಕ್ಕೆ ಏನು ಕಾರಣ, ಮಳೆ ಹೇರಳವಾಗಿ ಬಿದ್ದಿದೆ. ನೀರಿನ ಕೊರತೆಯೂ ಇಲ್ಲ. ಹೀಗಿದ್ದೂ ಬಿತ್ತನೆ ಏರಿಯಾ ಕಡಿಮೆ ಆಗಿರುವುದಕ್ಕೆ ಏನು ಕಾರಣ ಎಂದು ಕೃಷಿ ಇಲಾಖೆಯ ಜಂಟಿ ನರ‍್ದೇಶಕರಿಗೆ ಸಿಎಂ ಪ್ರಶ್ನಿಸಿದರು. ಹುರುಳಿ, ಮುಸುಕಿನ ಜೋಳ ಬಿತ್ತನೆ ಇನ್ನೂ ಆಗಬೇಕಿದೆ. ಕೆಲವು ರೈತರು ಬೆಳೆಯನ್ನು ಬದಲಾಯಿಸಿದ್ದಾರೆ. ಗೊಬ್ಬರ, ಬೀಜ ನಮ್ಮಲ್ಲಿ ಸಂಗ್ರಹ ಇದೆ. ರೈತರಿಗೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರವನ್ನೂ ದಾಸ್ತಾನು ಮಾಡಿಟ್ಟುಕೊಂಡಿದ್ದೇವೆ. ಯೂರಿಯಾ ಅಗತ್ಯ ಇರುವುದಕ್ಕಿಂತ ಹೆಚ್ಚು ಸಂಗ್ರಹವಿದೆ ಎಂದು ಜಂಟಿ ನಿರ್ದೇಶಕರು ಉತ್ತರಿಸಿದರು.
*ಬೇರೆ ಬೇರೆ ತಾಲೂಕಿನ ಕೃಷಿ ಭೂಮಿಗಳಿಗೆ ಭೇಟಿ ನೀಡಿದ್ದೀರಾ? ಭೇಟಿ ನೀಡಿದ ಬಗ್ಗೆ ಡೈರಿ ಬರೆದಿದ್ದೀರಾ? ನಿಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೈರಿ ಬರೆದಿರುವುದನ್ನು, ಸ್ಥಳಕ್ಕೆ ಭೇಟಿ ನೀಡಿರುವುದನ್ನು ಪರಿಶೀಲಿಸಿದ್ದೀರಾ ಎಂದು ಕೇಳಿದ ಸಿಎಂ ಡೈರಿ ತೂರಿಸುವಂತೆ ಸೂಚಿಸಿದರು. ಪ್ರವಾಹದಿಂದ ಆಗಿರುವ ಅನಾಹುತಗಳು ಮತ್ತು ಪರಿಹಾರ ಹಾಗೂ ರೈತರ ಆತ್ಮಹತ್ಯೆಗಳು ಹಾಗೂ ಪರಿಹಾರ ಸರ‍್ಪಕವಾಗಿ ಒದಗಿಸಿರುವ ಬಗ್ಗೆ ಮಾಹಿತಿ ಪಡೆದು ದಾಖಲೆ ಪರಿಶೀಲಿಸಿದರು.
*ಯಾವ ಯಾವ ಬೆಳೆಗಳಿಗೆ ಯಾವ ಯಾವ ರೋಗ ಬಂದಿದೆ? ಇದಕ್ಕೆ ಕಾರಣಗಳನ್ನು ಮತ್ತು ಪರಿಣಾಮಗಳನ್ನು ರೈತರಿಂದ ಕೇಳಿ ದಾಖಲು ಮಾಡಿಕೊಂಡಿದ್ದೀರಾ? ಎಷ್ಟು ಹೆಕ್ಟೇರ್ ಬೆಳೆಗೆ ವಿಮೆ ಹಣ ಸಂದಾಯ ಆಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿದರು.
*ಮಹಾರಾಷ್ಟ್ರದ ರೈತರು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಾರೆ. ನಮ್ಮ ಜಿಲ್ಲೆಯಲ್ಲಿ ಎರಡು ಬೆಳೆ ಮಾತ್ರ ಸಾಧ್ಯವಾಗುತ್ತಿದೆ. ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿ ಅಧ್ಯಯನ ಮಾಡಿಕೊಂಡು, ನಮ್ಮ ಇಲ್ಲಿನ ವಾತಾವರಣ ಮತ್ತು ಪರಿಸ್ಥಿತಿಗೆ ಹೇಗೆ ಅಳವಡಿಸಲು ಸಾಧ್ಯ ಎನ್ನುವ ಬಗ್ಗೆ ವರದಿ ನೀಡಿ ಎನ್ನುವ ಸೂಚನೆಯನ್ನು ಮುಖ್ಯಮಂತ್ರಿಗಳು ಜಂಟಿ ನರ‍್ದೇಶಕರಿಗೆ ಸೂಚಿಸಿದರು.
*ಬಾಳೆ ಬೆಳೆ ಹಿಂದಿನ ತಿಂಗಳುಗಳಲ್ಲಿ ಕಡಿಮೆ ಆಗಿತ್ತು. ಈಗ ಹೆಚ್ಚಾಗಿದೆ. ಶುಂಟಿ ಕೂಡ ಹೆಚ್ಚಾಗಿದೆ. ಅಡಿಕೆ ಬೆಳೆಯುವ ಪ್ರಮಾಣ ಕೂಡ ಹೆಚ್ಚಾಗಿದೆ. ಶುಂಟಿ ಮತ್ತು ಇತರೆ ಬೆಳೆಗಳಿಗೆ ರೋಗ ಬಾಧಿಸಿತ್ತು. ವಿಜ್ಞಾನಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಬಿಸಿಲಿನ ಕೊರತೆಯಿಂದ ಕಡಿಮೆಯಾಗಿತ್ತು. ಬಿಸಿಲು ಬರುತ್ತಿದ್ದಂತೆ ಮತ್ತೆ ಇಳುವರಿ ಹೆಚ್ಚಾಗುವ ಬಗ್ಗೆ ವಿಜ್ಞಾನಿ ಗಳು ತಿಳಿಸಿದ್ದಾರೆ. ತೆಂಗು ಮತ್ತು ಅಡಿಕೆ ಬೆಳೆಗೆ ಕೆಲವು ಕಡೆ ರೋಗ ಬಂದಿದೆ. ಸ್ಥಳಕ್ಕೇ ಹೋಗಿ ರೋಗ ತಡೆಗಟ್ಟಲು ಮೊದಲ ಹಂತದಲ್ಲಿ ಕ್ರಮ ಕೈಗೊಂಡು ಬಳಿಕ ರೋಗ ನಿವಾರಣೆಗೆ ಔಷಧ ಗಳನ್ನು ಸಿಂಪಡಿಸಲಾಗಿದೆ. ಆದಾಯ ಹೆಚ್ಚು ಎನ್ನುವ ಕಾರಣಕ್ಕೆ ರೈತರು ತೋಟಗಾರಿಕಾ ಬೆಳೆಗಳಿಗೆ ಹೆಚ್ಚೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಸಭೆಗೆ ಮಾಹಿತಿ ನೀಡಿದರು.


