ವಿಚ್ಛೇದನ ಪ್ರಕರಣವೊಂದರಲ್ಲಿ ಪ್ರತಿ ತಿಂಗಳು ಪತಿ ತನಗೆ 6 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೇಳಿದ ಮಹಿಳೆಯ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ನವದೆಹಲಿಯಲ್ಲಿ ಕೌಟುಂಬಿಕ ನ್ಯಾಯಾಲಯದ ಕೋರ್ಟ್ ವಿಚಾರಣೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯಾಯಾಧೀಶರ ನಿರ್ಧಾರಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾಸಿಕವಾಗಿ ತನಗೆ 6,16,300 ರೂಪಾಯಿ ಪರಿಹಾರ ನೀಡಬೇಕು ಮಹಿಳೆ ಕೋರ್ಟ್‌ಗೆ ಮನವಿ ಮಾಡಿದ್ದು, ಅದನ್ನು ನಿರಾಕರಿಸಲಾಗಿದೆ. ನ್ಯಾಯಾಧೀಶರು 6,16,300 ರೂಪಾಯಿ ತಿಂಗಳಿಗೆ ಮಾಸಿಕ ಪರಿಹಾರವೇ, ಯಾರಾದರೂ ತಿಂಗಳಿಗೆ ಇಷ್ಟೊಂದು ಹಣ ವೆಚ್ಚ ಮಾಡ್ತಾರಾ, ಒಂಟಿ ಮಹಿಳೆಯಾದ ಅವರು ಅವರೊಬ್ಬರಿಗಾಗಿ ಆಕೆ ಅಷ್ಟೊಂದು ಹಣ ವೆಚ್ಚ ಮಾಡುವುದಾದರೆ ಅವರೇ ಅಷ್ಟೊಂದು ಮೊತ್ತ ದುಡಿದು ಸಂಪಾದಿಸಲಿ, ಗಂಡನ ಮೇಲೆ ಅವಲಂಬಿತಳಾಗುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮಗೆ ಯಾವುದೇ ಇತರ ಕುಟುಂಬದ ಜವಾಬ್ದಾರಿ ಇಲ್ಲ, ಮಕ್ಕಳನ್ನು ನೋಡಿಕೊಳ್ಳಬೇಕಿಲ್ಲ, ನಿಮಗಾಗಿ ನೀವು ಇಷ್ಟೊಂದು ಮೊತ್ತದ ಹಣವನ್ನು ವೆಚ್ಚ ಮಾಡುತ್ತೀರಾ, ಈ ರೀತಿ ಕೋರ್ಟ್ ಮುಂದೆ ಹೇಳಬೇಡಿ. ನಿಜವಾಗಿ ಎಷ್ಟು ವೆಚ್ಚ ಅಗತ್ಯವಿದೆ ಅದನ್ನು ಹೇಳಿ. ಇಲ್ಲದಿದ್ದರೆ ಈ ಅರ್ಜಿಯನ್ನು ಈಗಲೇ ವಜಾ ಮಾಡುವೆ, ಇದು ಸೆಕ್ಷನ್ 24ರ ಉದ್ದೇಶ ಅಲ್ಲ ಎಂದು ನ್ಯಾಯಾಧೀಶರು ಮಹಿಳೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೊಂದು ಶೋಷಣೆ ಎಂದು ಕರೆದ ನ್ಯಾಯಾಧೀಶರು ಈ ವಿಚಾರದಲ್ಲಿ ನಿಜವಾದ ವೆಚ್ಚ ಏನು ಎಂಬುದರೊಂದಿಗೆ ಸ್ಪಷ್ಟವಾಗಿ ಬನ್ನಿ, ಲಕ್ಷದ ಲೆಕ್ಕ ಬೇಡ ಎಂದಿದ್ದಾರೆ. ಈ ಮಹಿಳಾ ನ್ಯಾಯಾಧೀಶ ರಿಗೆ ಕೆಲವರು ಧನ್ಯವಾದ ಹೇಳಿದ್ದು, ಮಹಿಳಾ ಸಬಲೀಕರಣ ಎಂದರೆ ಏನು ಹಾಗೂ ಏನು ಅಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.


