ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಾಲ್ಕು ವರ್ಷ ಪ್ರೀತಿ ಮಾಡಿ ಮದುವೆಯಾಗಿ ಗರ್ಭಿಣಿಯಾಗಿದ್ದ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಅಮೀರಬಿ ಮನಿಯಾರ (21) ಪತಿಯಿಂದ ಹಲ್ಲೆಗೊಳಗಾದ ಗರ್ಭಿಣಿ. ಪತಿ ಅಹ್ಮದರಾಜ್ ಮಕ್ತೇಸೂರ್ ಹಲ್ಲೆ ನಡೆಸಿದ್ದರಿಂದ ಪತ್ನಿಯ ಹೊಟ್ಟೆಯಲ್ಲಿದ್ದು ಆರು ತಿಂಗಳ ಶಿಶು ಮೃತಪಟ್ಟಿದೆ.
ಕಾರವಾರ ಜಿಲ್ಲೆ ಮುಂಡಗೋಡ ತಾಲೂಕಿನ ಓಣಿಕೇರಿಯ ಅಮೀರಬಿ ಮತ್ತು ಹಾನಗಲ್ ತಾಲೂಕಿನ ಅಹ್ಮದರಾಜ್ ಮಕ್ತೇಸೂರ್ ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ಅಹ್ಮದರಾಜ್ ಮತ್ತು ಅವರ ಕುಟುಂಬಸ್ಥರು ಅಮೀರಬಿಯ ಮೇಲೆ ನಿತ್ಯ ಹಲ್ಲೆ ನಡೆಸುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ.
ಗರ್ಭಿಣಿಯಾಗಿದ್ದರೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕುತ್ತಿಗೆ, ಕೈ ಕಾಲುಗಳ ಮೇಲೆ ರಕ್ತ ಹೆಪ್ಪುಗಟ್ಟಿದೆ. ಗಂಭೀರ ಗಾಯಗೊಂಡಿರುವ ಅಮೀರಬಿಯನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ತಿಗಾಗಿ ತಂದೆಯ ಕೊಲೆಗೈದ ಮಗ
ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನು ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಾರಾಯಣ ಪರಶು ಮರಾಠಿ (51) ಮಗನಿಂದ ಕೊಲೆಯಾದವರು. ಮಗ ಹರೀಶ ಮರಾಠಿ (29) ಕೊಲೆಗೈದು ಕೊಡಲಿ ಸಹಿತ ಪರಾರಿಯಾಗಿದ್ದಾನೆ.
ತೋಟದ ಕೆಲಸ ಮಾಡುತ್ತಿದ್ದ ಹರೀಶ್ ಪತ್ನಿ ಸವಿತಾ ಹಾಗೂ ಮಗಳು ಸುರಕ್ಷಾ, ತಂಗಿ ತಾರಾ ಜತೆ ಒಂದೇ ಮನೆಯಲ್ಲಿದ್ದು, ಅಡುಗೆ ಪ್ರತ್ಯೇಕವಾಗಿತ್ತು. ಸಹೋದರಿ ತಾರಾ ಮತ್ತು ಪತ್ನಿ ಸವಿತಾ ನಡುವೆ ಆಗಾಗ ಜಗಳವಾಗುತ್ತಿತ್ತು. ಭಾನುವಾರ ಜಗಳವಾಗಿದ್ದು, ಹರೀಶ್ ಸಹೋದರಿ ತಾರಾ ಮೇಲೆ ಹಲ್ಲೆ ನಡೆಸಿದ್ದ.
ಕೋಪಗೊಂಡ ತಂದೆ ನಾರಾಯಣ ಮಗನಿಗೆ ಬೈದು, ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ ಎಂದು ಎಚ್ಚರಿಸಿದ್ದರು. ಕೋಪಗೊಂಡ ಹರೀಶ ಮರಾಠಿ ಕೊಡಲಿಯನ್ನು ಎತ್ತಿ ತಂದೆಯ ತಲೆಗೆ ಹೊಡೆದಿದ್ದಾನೆ. ತಾರಾ ಕೂಡಲೇ ತಂದೆಯನ್ನು ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ನಾರಾಯಣ ಮೃತಪಟ್ಟಿದ್ದರು. ಪರಾರಿಯಾಗಿದ್ದ ಆರೋಪಿ ಹರೀಶನನ್ನು ಪೊಲೀಸರು ಬಂಧಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


