Menu

ರಾಜ್ಯಕ್ಕೆ ಹಂಚಿಕೆಯಾದ ರಸಗೊಬ್ಬರ ಪೂರೈಸಿ: ಸಚಿವ ಜೆ.ಪಿ.ನಡ್ಡಾಗೆ ಸಿಎಂ ಪತ್ರ

CM Siddaramaiah Urea fertilizer

ರಾಜ್ಯದಲ್ಲಿ ಯೂರಿಯಾ ಗೊಬ್ಬರ ಅಭಾವ ನೀಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದು, ರಾಜ್ಯಕ್ಕೆ ಹಂಚಿಕೆಯಾದ ರಸಗೊಬ್ಬರ ಪ್ರಮಾಣವನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ. ಕೊಪ್ಪಳ, ಗದಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರೈತರು ಯೂರಿಯಾ ಒದಗಿಸುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕೇಂದ್ರ ಸರ್ಕಾರವು 2025ರ ಖಾರಿಫ್‌ ಬೆಳೆಗೆ ರಾಜ್ಯಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದೆ. ಈವರೆಗೆ 5,16,959 ಮೆಟ್ರಿಕ್ ಟನ್ ರಸಗೊಬ್ಬರ ಮಾತ್ರ ಸರಬರಾಜು ಮಾಡಲಾಗಿದೆ. ಏಪ್ರಿಲ್​ನಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದೆ. ಕೆಲವು ರಸಗೊಬ್ಬರ ಕಂಪನಿಗಳು ಕೇಂದ್ರವು ಮಾಡಿದ ಹಂಚಿಕೆಯ ಪ್ರಕಾರ ಯೂರಿಯಾ ಗೊಬ್ಬರ ಪೂರೈಸುತ್ತಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ಈ ವರ್ಷದ ಆರಂಭದಲ್ಲಿಯೇ ಮಾನ್ಸೂನ್ ಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿವಿಧ ಬೆಳೆಗಳ ವ್ಯಾಪ್ತಿಯು ಹೆಚ್ಚಾಗಿದೆ. ಯೂರಿಯಾ ಪೂರೈಕೆಯ ತುರ್ತು ಅವಶ್ಯಕತೆಯಿದೆ. ಏಕೆಂದರೆ ತುಂಗಭದ್ರಾ, ಕಾವೇರಿ ಮತ್ತು ಕೃಷ್ಣಾ ನದಿಗಳ ಆಯಕಟ್ಟಿನ ಪ್ರದೇಶಗಳಲ್ಲಿ ನೀರನ್ನು ಮೊದಲೇ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಪತ್ರದಲ್ಲಿ ವಿವರಿಸಿದ್ದಾರೆ.

ಮುಂಗಾರು ಆರಂಭಿಕ ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಹೆಚ್ಚಿನ ಗೊಬ್ಬರ ಬಳಸುವ ಬೆಳೆಯಾದ ಮೆಕ್ಕೆಜೋಳದ ವಿಸ್ತೀರ್ಣವು 2 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ. ದ್ವಿದಳ ಧಾನ್ಯಗಳ ವಿಸ್ತೀರ್ಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಆಗಿದೆ. 13,000 ಹೆಕ್ಟೇರ್ ಖಾರಿಫ್ ಪೂರ್ವ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಯೂರಿಯಾ ಕೊರತೆಯು ರೈತರಲ್ಲಿ ಆತಂಕ ಸೃಷ್ಟಿಸುತ್ತಿದೆ. ರಾಜ್ಯಕ್ಕೆ ಹಂಚಿಕೆ ಪ್ರಕಾರ ರಸಗೊಬ್ಬರ ಪೂರೈಸಿ. ಬಾಕಿ ಕೊರತೆ ಇರುವ ಯೂರಿಯಾದ ಪೂರೈಕೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ರಸ್ತೆ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ನಾಮಜೋಶಿ ರಸ್ತೆಯಲ್ಲಿನ ಗೋದಾಮಿಗೆ ಗೊಬ್ಬರಕ್ಕಾಗಿ ಬೆಳಗ್ಗೆಯಿಂದಲೇ ರೈತ ಕುಟುಂಬಗಳು ಸರತಿ ಸಾಲಿನಲ್ಲಿ ನಿಂತು ಗೊಬ್ಬರ ಸಿಗುತ್ತಿಲ್ಲ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *