ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಮೊದಲ ಹಂತದಲ್ಲಿ ಅನಧಿಕೃತ ಕಾಮಗಾರಿ, ಪರಿಸರಕ್ಕೆ ಗಂಭೀರ ಹಾನಿ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಯೋಜನೆಯ ಪರಿಶೀಲನೆಗೆ ಒತ್ತಾಯಿಸಿದೆ. ಅಲ್ಲಿಯವರೆಗೆ ಮುಂದಿನ ಹಂತಕ್ಕೆ ಅನುಮತಿ ನಿರಾಕರಿಸಿದೆ.
ದಕ್ಷಿಣ ಕರ್ನಾಟಕದ ಬರಪೀಡಿತ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿಕ್ಕಮಗಳೂರು, ಹಾಸನ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಸಹಾಕಾರಿಗಲು ಈ ಯೋಜನೆ ರೂಪಿಸಲಾಗಿದೆ.
ಅನುಮತಿ ಇಲ್ಲದೆ ರಸ್ತೆ ನಿರ್ಮಾಣ, ಕಾಲುವೆ ತೋಡುವಿಕೆ, ಮಣ್ಣು ತೆಗೆಯುವಿಕೆಗೆ ಕೇಂದ್ರ ಆಕ್ಷೇಪ, ಅರಣ್ಯ ನಾಶ, ಮಣ್ಣು ಸವಕಳಿ, ಭೂಕುಸಿತ ಅಪಾಯ, ಜಲಮೂಲಗಳ ಮೇಲೆ ಒತ್ತಡದ ಆರೋಪ. ಪರಿಸರ ಪ್ರಭಾವ ಮೌಲ್ಯಮಾಪನ ಪೂರ್ಣಗೊಳಿಸದೆ ಕೆಲಸ ಆರಂಭದ ಆರೋಪವೂ ಇದೆ.
ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೂ ಕೇಂದ್ರ ಆಕ್ಷೇಪಿಸಿದೆ. ಪಶ್ಚಿಮ ಘಟ್ಟದ 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಸಮಿತಿ ತಡೆ ನೀಡಿದೆ.
ಪಶ್ಚಿಮ ಘಟ್ಟಕ್ಕೆ ಅಪಾಯವೊಡ್ಡುವ ಯೋಜನೆ ಇದಾಗಿದೆ ಎಂದು ಕೇಂದ್ರ ಹೇಳಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆ + ನೀರಾವರಿಗೆ ಈ ಯೋಜನೆ ನೆರವಾಗಲಿದೆ ಎಂಬುದು ಸರ್ಕಾರದ ಉದ್ದೇಶ.
ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದ 54 ಹೆಕ್ಟೇರ್ ಅರಣ್ಯ ನಾಶ, 15,000ಕ್ಕೂ ಹೆಚ್ಚು ಮರಗಳ ಕಡಿತ, ವಿಶ್ವದ 34 ಜೀವವೈವಿಧ್ಯ ಕೇಂದ್ರ ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾದ ದುರ್ಲಭ ಪ್ರಭೇದಗಳಿಗೆ ಅಪಾಯ, ಭೂಕುಸಿತ, ಮಣ್ಣು ಸವಕಳಿ ಬಗ್ಗೆ ಕೇಂದ್ರ ತೀವ್ರ ಆಕ್ಷೇಪ ದಾಖಲಿಸಿದೆ. ಯೋಜನೆಗಳ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಪ್ರಸ್ತಾವ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ.


