Menu

ದಸರಾ ಜಂಬೂ ಸವಾರಿ: ಆ.4ರಂದು ವೀರನಹೊಸಳ್ಳಿಯಿಂದ ಗಜ ಪಯಣ

ಈ ಬಾರಿಯೂ ದಸರಾ ಜಂಬೂಸವಾರಿಯಲ್ಲಿ  ಶ್ರೀ ಚಾಮುಂಡೇಶ್ವರಿ ದೇವಿಯ ಚಿನ್ನದ  ಅಂಬಾರಿಯನ್ನು  ಹೊತ್ತು ಅಭಿಮನ್ಯು ಹೆಜ್ಜೆ ಹಾಕಲಿದೆ,  ಆಗಸ್ಟ್ 4ರಂದು ಹುಣಸೂರು ಬಳಿಯ ವೀರನಹೊಸಳ್ಳಿಯಿಂದ ವಿಧ್ಯುಕ್ತವಾಗಿ ಗಜಪಯಣಕ್ಕೆ ಚಾಲನೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು 2025ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಒಟ್ಟು 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಅವರು, 2020ರಿಂದ ವಿಜಯ ದಶಮಿಯ ದಿನದಂದು ಜಂಬೂಸವಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ವಿಗ್ರಹವಿರುವ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯುವೇ ಕ್ಯಾಪ್ಟನ್ ಆಗಲಿದ್ದಾನೆ ಎಂದು ತಿಳಿಸಿದರು.

ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಕುಮ್ಕಿ ಆನೆ ಎಂದೇ ಖ್ಯಾತನಾಗಿದ್ದಾನೆ ಎಂದರು. ಈ ಬಾರಿಯ ಜಂಬೂಸವಾರಿಯಲ್ಲಿ ಮತ್ತೀಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಗಂಡಾನೆಗಳು ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ ಲಕ್ಷ್ಮೀ (53) ಹೆಣ್ಣಾನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ 5 ಆನೆಗಳನ್ನು ಕಾಡಿನಿಂದ ಮೈಸೂರಿಗೆ ತರಲಾಗುವುದು. ಕಾಡಿನಿಂದ ನಾಡಿಗೆ ಬರುವ ಈ ಆನೆಗಳಿಗೆ ಆ.4ರಂದು ನಡೆಯುವ ಗಜಪಯಣದಲ್ಲಿ ವಿಧ್ಯುಕ್ತವಾಗಿ ಮತ್ತು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಗುವುದು ಎಂದೂ ತಿಳಿಸಿದರು.  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿಸಿ ರೇ, ಉನ್ನತಾಧಿಕಾರಿಗಳಾದ ಮಹೇಶ್ ಶಿರೂರ್, ಮನೋಜ್ ಕುಮಾರ್, ಮಾಲತಿ, ಪ್ರಭುಗೌಡ ಬಿರಾದಾರ್ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published. Required fields are marked *