ಕನಕಪುರ ತಾಲೂಕಿನ ಸಾತನೂರು ಅರಣ್ಯ ವಲಯದ ವ್ಯಾಪ್ತಿಯ ಕುನ್ನೂರು ಗ್ರಾಮದ ಬಳಿ ಅರ್ಕಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಮೃತಪಟ್ಟಿವೆ.
ಕಾಡಾನೆಗಳು ಹಿನ್ನೀರು ದಾಟಲು ಮುಂದಾದಾಗ ನೀರಿನೊಳಗಿದ್ದ ಜೊಂಡಿನಲ್ಲಿ ಸಿಲುಕಿ ಮುಂದಕ್ಕೂ ಹೋಗಲಾಗದೆ, ಹಿಂದಕ್ಕೂ ಬರಲಾಗದೆ ಒದ್ದಾಡಿ ಮೃತಪಟ್ಟಿವೆ ಎನ್ನಲಾಗಿದೆ. ಹಿನ್ನೀರಿನಲ್ಲಿ ಕಾಡಾನೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆನೆಗಳ ಕಳೇಬರವನ್ನು ಹಿನ್ನೀರಿನಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಂಡರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಬೈಕ್ ಅಪಘಾತಕ್ಕೆ ಯುವಕರಿಬ್ಬರು ಬಲಿ
ಮಾಗಡಿ ತಾಲೂಕಿನ ರಸ್ತೆ ಪಾಳ್ಯದ ಗಾಂಧಿ ಫಾರಂ ಬಳಿ ಬೈಕ್ ಅಪಘಾತದಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಮಾರ್ಗವಾಗಿ ಹಾಸನ ಕಡೆ ಸಾಗುವ ವೇಳೆ ಅಪಘಾತ ನಡೆದಿದೆ.
ಅತೀ ವೇಗದಲ್ಲಿ ಬಂದು ರಸ್ತೆಯ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಾಸನದ ಕಡೆ ಬೈಕ್ ರೈಡ್ ಹೊರಟಿದ್ದ ಬೆಂಗಳೂರು ನಗರದ ನಿವಾಸಿಗಳಾದ ಕೇಶವ ಪ್ರಸಾದ್(21) ಮಯೂರ್( 20) ಮೃತಪಟ್ಟವರು. ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.


