ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದಲ್ಲಿ ಆಟವಾಡುತ್ತ ಕೆರೆ ಬಳಿ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ.
ಅನಿಕೇತ್ ಕುಮಾರ್(12), ರೆಹಮಾತ್ ಬಾಬಾ(11) ಮೃತಪಟ್ಟ ಬಾಲಕರು. ಬಾಲಕ ಅನಿಕೇತ್ ಕುಮಾರ್ ಬಿಹಾರ ಮೂಲದವ, ರೆಹಮಾತ್ ಬಾಬಾ ಆಂಧ್ರ ಕದಿರಿ ಮೂಲದ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಪೋಷಕರ ಈ ಮಕ್ಕಳು ಸಂಜೆ ಮನೆಯ ಬಳಿಯೇ ಆಟವಾಡುತ್ತಿದ್ದರು. ಆಟವಾಡುತ್ತಾ ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಕೆರೆಗೆ ಇಳಿದಿರುವ ಮಕ್ಕಳ ಈಜು ಬಾರದೆ ಮುಳುಗಿ ಅಸು ನೀಗಿದ್ದಾರೆ.
ಮಕ್ಕಳು ಸಂಜೆಯಾದರೂ ಮನೆಗೆ ಹಿಂತಿರುಗದ್ದು ಕಂಡು ಪೋಷಕರು ಆತಂಕಿತರಾಗಿ ಮನೆ ಸುತ್ತಮುತ್ತ ಸೇರಿ ಗ್ರಾಮದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಬೆಳಗ್ಗೆ ಕೆರೆಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ತದೇಹ ಕಂಡ ಗ್ರಾಮಸ್ಥರು ತಕ್ಷಣ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ತಂಡವು ಧಾವಿಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೊ ಉರುಳಿ ವಿದ್ಯಾರ್ಥಿನಿ ಸಾವು
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಬಳಿ ಆಟೋ ಪಲ್ಟಿಯಾಗಿ ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಅಸು ನೀಗಿದ್ದಾಳೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸಾಪಟ್ಟಣದ ನಿವಾಸಿ ಪ್ರೇಮಾ(18) ಮೃತ ವಿದ್ಯಾರ್ಥಿನಿಯಾಗಿದ್ದು, ಆಕೆ ಬಸಾಪಟ್ಟಣದಿಂದ ಗಂಗಾವತಿ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


