ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಕಿಡ್ನಾಪ್ ಅಂಡ್ ಮರ್ಡರ್ ಕೇಸ್ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಆರೋಪಿಯಾಗಿರುವ ಆಂದ್ರಪ್ರದೇಶ ಮೂಲದ ರವಿಪ್ರಸಾದ್ ರೆಡ್ಡಿಯ ಎರಡು ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೊಮ್ಮಸಂದ್ರ ಸ್ಮಶಾನದ ಬಳಿ ರಾತ್ರಿ ಈ ಘಟನೆ ನಡೆದಿದೆ. ಆರೋಪಿಯು 6ನೇ ತಾರೀಖು ಹೆಬ್ಬಗೋಡಿ ಉದ್ಯಮಿ ಬಾಲಪ್ಪ ರೆಡ್ಡಿ ಎಂಬವರನ್ನು ಜಿಗಣಿ ರಿಂಗ್ ರೋಡ್‌ನಲ್ಲಿ ಕಿಡ್ನಾಪ್ ಮಾಡಿದ್ದ. ಹಣಕ್ಕೆ ಡಿಮ್ಯಾಂಡ್ ಮಾಡಿ, ಹಣ ನೀಡದಿದ್ದಾಗ ಕಟಿಂಗ್ ಫ್ಲೇರ್‌ನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ತಮಿಳುನಾಡಿನ ಶಾಣಮಾವು ಕಾಡಿನಲ್ಲಿ ಎಸೆದಿದ್ದ.
ಅದಕ್ಕೂ ಮೊದಲು ಮಾದೇಶ ಎಂಬಾತನನ್ನು 4ನೇ ತಾರೀಖು ಕಿತ್ತಗಾನಹಳ್ಳಿಯ ಮನೆಯಲ್ಲಿ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ. ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಆರೋಪಿ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಸ್ಥಳ ಮಹಜರ್ ವೇಳೆ ಆರೋಪಿ ಹೆಡ್ ಕಾನ್ಸ್‌ಟೇಬಲ್ ಆಶೋಕ್ ಮೇಲೆ ದಾಳಿ ಮಾಡಿದ್ದಾನೆ, ಆಗ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ವಾರ್ನ್ ಮಾಡಿದರೂ ದಾಳಿ ನಿಲ್ಲಿಸದಿದ್ದಾಗ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ.
ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


