Menu

ವಿದ್ಯುತ್‌ ಕಂಬಕ್ಕೆ ಲಾರಿ ಗುದ್ದಿ ಗೋಡೆ ಬಿದ್ದು ಮಗು ಸಾವು

ಬೆಂಗಳೂರಿನ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಕಾಲೊನಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ವಿದ್ಯುತ್‌ ಕಂಬಕ್ಕೆ ತಗುಲಿ ಗೋಡೆ ಬಿದ್ದು ಪರಿಣಾಮ ಮಗುವೊಂದು ಮೃತಪಟ್ಟಿದೆ.

ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ (1.8) ಮೃತಪಟ್ಟ ಮಗು. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಈ ದುರಂತದಲ್ಲಿ ಗೋಡೆ ಕುಸಿದು ಬಿದ್ದು ಮಗು ಅಸು ನೀಗಿದ, ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡಕ್ಕೆ ಸಿಮೆಂಟ್‌ ಹಾಕಲು ಎಸ್‌ಎಲ್‌ವಿ ರೆಡಿ ಮಿಕ್ಸ್‌ ಸಂಸ್ಥೆಗೆ ಸೇರಿದ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಇದಾಗಿತ್ತು, ಕೆಲಸ ಮುಗಿಸಿ ಸಂಜೆ ತೆರಳುತ್ತಿದ್ದ ವೇಳೆ ಕುಂದಲಹಳ್ಳಿಯ 8 ನೇ ಕ್ರಾಸ್‌ ಬಳಿ ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ವೈರ್ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಗಮನಿಸದೆ ಚಾಲಕ ಮುಂದಕ್ಕೆ ಲಾರಿ ಚಲಾಯಿದಾಗ ವಿದ್ಯುತ್‌ ಕಂಬ ಬಿದ್ದು ಸಿದ್ದಪ್ಪ ಅವರ ಶೀಟ್‌ ಮನೆಯ ಗೋಡೆ ಕುಸಿದಿದೆ. ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಪ್ರಣವ್ ಮೇಲೆ ಗೋಡೆಯ ಅವಶೇಷಗಳು ಬಿದ್ದಿವೆ. ಗಾಯಗೊಂಡಿದ್ದ ಪ್ರಣವ್‌ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಎಚ್‌ಎಎಲ್‌ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ, ಪಶ್ಚಿಮ ಬಂಗಾಳ ಮೂಲದ ಲಾರಿ ಚಾಲಕ ವಿಪುಲ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ದುರಂತ ನಡೆಯುವ ಎರಡು ನಿಮಿಷಗಳ ಹಿಂದೆ ಪ್ರಣವ್ ಜತೆ ತಂದೆ ಸಿದ್ದಪ್ಪ ಮನೆಯ ಆವರಣದಲ್ಲೇ ಆಟವಾಡುತ್ತಿದ್ದರು. ಬಳಿಕ ಮಗನನ್ನು ಅಲ್ಲೇ ಬಿಟ್ಟು ಕ್ಯಾನ್​ ತೆಗೆದುಕೊಂಡು ನೀರು ತರಲು ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ.

Related Posts

Leave a Reply

Your email address will not be published. Required fields are marked *